ಪ್ರೊ.ಜಿ.ವೆಂಕಟಸುಬ್ಬಯ್ಯನವರ ಕೊಡುಗೆ ಅಮೋಘ

ಕಲಬುರಗಿ.ಏ.19: ಕನ್ನಡ ನಿಘಂಟುಗಳ ರಚನೆ ಅನುಪಮ, ಅಮೋಘವಾದದ್ದು. ಕನ್ನಡಕ್ಕೆ ಅನೇಕ ವರ್ಷಗಳಿಂದ ನಿಘಂಟು ತಜ್ಞರಾಗಿ, ಅಕ್ಷರದ ಬ್ರಹ್ಮನಾಗಿ ಸೇವೆ ಸಲ್ಲಿಸುತ್ತಿದ್ದ ಶತಾಯುಷಿ ಪ್ರೊ.ಜಿ.ವೆಂಕಟಸುಬ್ಬಯ್ಯನವರ ಕೊಡುಗೆ ಅಮೋಘವಾಗಿದೆ. ಅವರ ಅಗಲಿಕೆ ಕನ್ನಡಕ್ಕೆ ತುಂಬಲಾರದ ನಷ್ಟವಾಗಿದೆಯೆಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಎಂ.ಎಂ.ಎನ್ ಟ್ಯೂಟೋರಿಯಲ್ಸ್‍ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದಿಂದ ಸೋಮವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ‘ಪ್ರೊ.ಜಿ.ವೆಂಕಟಸುಬ್ಬಯ್ಯನವರಿಗೆ ಶೃದ್ಧಾಂಜಲಿ ಸಭೆ’ಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ, ಮೌನಾಚರಣೆ ಮಾಡಿ, ನಂತರ ನುಡಿ ನಮನಗಳನ್ನು ಸಲ್ಲಿಸಿದರು.
ನಾಡೋಜ ಪ್ರಶಸ್ತಿ, ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವ ಸೇರಿದಂತೆ ಅನೇಕ ಪ್ರಶಸ್ತಿ, ಗೌರವಕ್ಕೆ ಭಾಜನರಾಗಿದ್ದಾರೆ. ಕನ್ನಡ ನಿಘಂಟು ರಚನೆ ಕೆಲಸ ಸುಲಭವಾದದ್ದಲ್ಲ. ಅಂತಹ ಕೆಲಸವನ್ನು ನಿರಂತರವಾಗಿ ಮಾಡುವ ಮೂಲಕ, ಕನ್ನಡ ಶಬ್ಧ ಭಂಡಾರವನ್ನು ಶ್ರೀಮಂತಗೊಳಿಸಿದ್ದಾರೆ. ‘ಕನ್ನಡ ನಿಘಂಟು ಶಾಸ್ತ್ರ ಪರಿಚಯ’, ‘ಕನ್ನಡ ನಿಘಂಟು ಪರಿವಾರ ಸೇರಿದಂತೆ ಸಂಪಾದನೆ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ ಹೀಗೆ ಹಲವು ಮುಖಗಳಲ್ಲಿ ಕನ್ನಡದ ಸೇವೆ ಮಾಡಿದ ಹಿರಿಯ ಸಾಹಿತಿ ಅವರಾಗಿದ್ದಾರೆಂದರು.
ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ನಾಗೇಂದ್ರಪ್ಪ ಕಲಶೆಟ್ಟಿ, ಎಸ್.ಎಸ್.ಪಾಟೀಲ ಬಡದಾಳ, ಗಣೇಶ ಗೌಳಿ ಸೇರಿದಂತೆ ಹಲವರಿದ್ದರು.