
ಸೇಡಂ ಮಾ.12: ಸಮಾಜಶಾಸ್ತ್ರ ಪ್ರಾಧ್ಯಾಪಕರಾ ಗಿದ್ದುಕೊಂಡು ಕನ್ನಡ ಸಾಹಿತ್ಯದ ಬರವಣಿಗೆಯಲ್ಲಿ ತೊಡಗಿಸಿಕೊಂಡ ಪ್ರೊ.ಶೋಭಾದೇವಿ ಚೆಕ್ಕಿ ಅವರ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಕೊಡುಗೆ ಅನನ್ಯವಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕರಾದ ಪ್ರೊ.ಸಂಜಯಕುಮಾರ ಪಟ್ಟಣಕರ್ ಹೇಳಿದರು.
ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ನೃಪತುಂಗ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಪ್ರೊ.ಶೋಭಾದೇವಿ ಚೆಕ್ಕಿ ಅವರ ಸೇವಾ ನಿವೃತ್ತಿ ಶುಭಕೋರುವ ಹಾಗೂ ಶೋಭಾ ಯಾನ' ಅಭಿನಂದನ ಗ್ರಂಥದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ ಅವರು,
ಶೋಭಾ ಯಾನ’ ಗ್ರಂಥ ಜನಾರ್ಪಣೆ ಮಾಡಿ, ಮಕ್ಕಳ ಸಾಹಿತ್ಯ, ಆಧುನಿಕ ವಚನ ಸೇರಿದಂತೆ ಅನೇಕ ಕೃತಿಗಳನ್ನು ಕೊಟ್ಟಿದ್ದಾರೆ. ವಿದ್ಯಾರ್ಥಿಗಳ ಪ್ರೀತ್ಯಾಭಿಮಾನದ ದ್ಯೋತಕವಾಗಿರುವ ಶೋಭಾ ಯಾನ' ಅಭಿನಂದನ ಗ್ರಂಥವು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಎಂದು ಹೇಳಿದರು. ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷರು ಹಾಗೂ ಪೂಜ್ಯರಾದ ಶ್ರೀ ಸದಾಶಿವ ಸ್ವಾಮಿಜಿಯವರು ಮಾತನಾಡಿ, ಸೇಡಂ ನೆಲದಲ್ಲಿ ಚಟುವಟಿಕೆ ವ್ಯಕ್ತಿತ್ವವನ್ನು ಬೆಳೆಸಿಕೊಂಡು, ಸಾಹಿತ್ಯ ಕ್ಷೇತ್ರದಲ್ಲಿ ನಿರಂತರತೆ ಹೊಂದಿದ್ದಾರೆ. ಅವರ ಸೇವೆ ಇನ್ನಷ್ಟು ವಿದ್ಯಾರ್ಥಿಗಳಿಗೆ ಸಿಗುವಂತಾಗಲಿ ಎಂದು ಆಶಿಸಿದರು. ಮುಖ್ಯ ಅತಿಥಿಗಳಾಗಿದ್ದ ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖರು ಮತ್ತು ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಬಸವಲಿಂಗಮ್ಮ ಬ.ಪಾಟೀಲ ಮಾತನಾಡಿ, ಪ್ರೊ.ಶೋಭಾದೇವಿ ಚೆಕ್ಕಿ ಅವರು ಸೇಡಂ ಬಂದ ಸಂದರ್ಭದಲ್ಲಿ
ನಿಮ್ಮ ಉಡಿಯಲ್ಲಿ ಮಗಳನ್ನು ಹಾಕಿದ್ದೇನೆ. ಅವಳ ದೇಖರೇಖಿಯೆಲ್ಲಾ ನಿಮ್ಮದೇ’ ಎಂದು ತಾಯಿ ಪಾರ್ವತಿ ಚೆಕ್ಕಿ ಹೇಳಿದ್ದನ್ನು ನೆನಪಿಸಿಕೊಂಡರು. ಇವತ್ತು ನಿವೃತ್ತಿಯಾಗುವಾಗ, ನಿಮ್ಮ ಮಗಳನ್ನು ನಮ್ಮ ಮಗಳಿಗಿಂತ ಹೆಚ್ಚು ಪ್ರೀತಿಸಿದ್ದಕ್ಕೆ ಅಭಿಮಾನದ ಸಮಾ ರಂಭವೇ ಸಾಕ್ಷಿ' ಎಂದು ಹೇಳಿದರು. ಕಲಬುರಗಿ ಶ್ರೀ ಶರಣಬಸವೇಶ್ವರ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ರಾದ ಪ್ರೊ.ಪಾರ್ವತಿ ಚೆಕ್ಕಿ ಮಾತನಾಡಿ, ಕ್ರಿಯಾಶೀಲತೆಗೆ ಮತ್ತೊಂದು ಹೆಸರು ಶೋಭಾದೇವಿ. ಸದಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು, ಸೇಡಂ ನೆಲವನ್ನು ಶ್ರೀಮಂತಗೊಳಿಸುವಲ್ಲಿ ಪ್ರಯತ್ನಿಸಿದ್ದಾಳೆ ಎಂದು ಹೇಳಿದರು. ಇದಕ್ಕೂ ಮುನ್ನ, ಪ್ರೊ.ಶೋಭಾದೇವಿ ಚೆಕ್ಕಿ ಮತ್ತು ಪ್ರೊ.ಟಿ.ಶಿವಶರಣಪ್ಪ ಅವರನ್ನು ಶಿಕ್ಷಣ ಸಮಿತಿ, ಕಾಲೇಜು ಮತ್ತು ಅಭಿನಂದನ ಸಮಿತಿ ಪರವಾಗಿ ಸತ್ಕರಿಸಲಾಯಿತು. ಗ್ರಂಥದ ಸಂಪಾದಕ ಮಹಿಪಾಲರೆಡ್ಡಿ ಮುನ್ನೂರ್ ಅವರನ್ನು ಗೌರವಿಸಲಾಯಿತು. ಪ್ರೊ.ಶೋಭಾದೇವಿ ಚೆಕ್ಕಿ ಮಾತನಾಡಿ, ಶಿಕ್ಷಣ ಸಮಿತಿ, ಕಾಲೇಜಿನ ದಿನಗಳನ್ನು ನೆನಪಿಸಿ ಕೊಂಡರು. ಮಾನ್ಯ ಬಸವರಾಜ ಪಾಟೀಲ ಸೇಡಂ ಅವರ ಶೈಕ್ಷಣಿಕ ಕ್ರಿಯಾಶೀಲತೆಯನ್ನು ಹೊಗಳಿ, ಅವರ ಸಂಸ್ಥೆಯಲ್ಲಿ ಕಾಯಕ ಮಾಡಿದ್ದು ಮನಸಿಗೆ ತೃಪ್ತಿ ತಂದಿದೆ. ಅಭಿಮಾನದಿಂದ ಆಯೋಜಿಸಿದ್ದ ಈ ಸಮಾರಂಭಕ್ಕೆ ಕೃತಜ್ಞತೆ ಸಲ್ಲಿಸಿದರು.
ಶೋಭಯಾನ’ ಸಂಪಾದಕ ಮಹಿಪಾಲರೆಡ್ಡಿ ಮುನ್ನೂರ ಅವರು ಗ್ರಂಥದ ಕುರಿತು ಮಾತನಾಡಿ, ಅಭೂತಪೂರ್ವ ಗ್ರಂಥ ಮತ್ತು ಅಭೂತಪೂರ್ವ ಸಮಾರಂಭ ಕಂಡು ಮನಸ್ಸು ಆನಂದತುಂದಿಲಗೊಂಡಿದೆ. ಸಮಾಜಶಾಸ್ತ್ರ ಅಧ್ಯಯನಕ್ಕಷ್ಟೇ ಸೀಮಿತವಾಗದೇ ಸಾಹಿತ್ಯಿಕ, ಸಾಂಸ್ಕøತಿಕ ಮತ್ತು ಮಹಿಳಾ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡುವಲ್ಲಿ ಅಹರ್ನಿಶಿ ಶ್ರಮಿಸುತ್ತಿರುವುದಕ್ಕೆ ಈ ಸಮಾರಂಭವೇ ನಿದರ್ಶನ. ಯಶಸ್ವಿ ಮಹಿಳೆಯ ಹಿಂದೆ ಪತಿಯ ಪ್ರೇರಣೆ ಇದೆ. ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎಂಬ ಮಾತಿನಂತೆ ಈ ದಂಪತಿಗಳದು ವಿದ್ಯಾ ದಾಸೋಹ ಕಾಯಕಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದು ಶ್ಲಾಘನೀಯ ಎಂದರು. ನೃಪತುಂಗ ಕಾಲೇಜಿನ ಪ್ರಾಚಾರ್ಯ ಪ್ರೊ.ಶಾಮಸುಂದರ ಕಲಾಲ ಸ್ವಾಗತಿಸಿದರು. ಉಪನ್ಯಾಸಕ ಜಗನ್ನಾಥ ದೇಶಕ ಕಾರ್ಯಕ್ರಮ ನಿರೂಪಿಸಿದರು. ಅಮರಮ್ಮ ಮುಮ್ಮಾಜಿ ಆರಂಭದಲ್ಲಿ ಭಾವಗೀತೆ ಹಾಡಿದರು. ಉಮೇಶಶೆಟ್ಟಿ ಕಲಬುರಗಿ ಅವರು ಸಿದ್ದೇಶ್ವರ ಶ್ರೀಗಳ ಕುರಿತು ಗಾಯನ ಮಾಡಿದರು. `ಶೋಭಾಯಾನ’ ಅಭಿನಂದನ ಗ್ರಂಥದ ಲೇಖಕರಿಗೆ ಗೌರವಿಸಿ, ಮೊಮೆಂಟೊ ನೀಡಿ, ಗ್ರಂಥವನ್ನು ಕಾಣಿಕೆಯಾಗಿ ನೀಡಲಾಯಿತು. ಬಂಧುಗಳು, ವಿದ್ಯಾರ್ಥಿಗಳು, ಸಹಪಾಠಿಗಳು, ಸಾಹಿತಿಗಳು ಸೇರಿದಂತೆ ಸುಮಾರು 400 ಕ್ಕೂ ಹೆಚ್ಚು ಜನ ಪ್ರೊ.ಶೋಭಾದೇವಿ ಚೆಕ್ಕಿ ಮತ್ತು ಪ್ರೊ.ಟಿ.ಶಿವಶರಣಪ್ಪ ಅವರನ್ನು ಸನ್ಮಾನಿಸಿದರು. ಹಿರಿಯ ಕವಿ ಏ.ಕೆ.ರಾಮೇಶ್ವರ, ಪ್ರೊ.ಎಸ್.ಎಲ್.ಪಾಟೀಲ, ಎ.ಎಸ್. ಪಾಟೀಲ, ಡಾ.ಶರಣಬಸಪ್ಪ ವಡ್ಡನಕೇರಿ, ಡಾ.ಮನ್ನೆ ಹಾಶರೆಡ್ಡಿ, ಡಾ.ವಾಸುದೇವ ಅಗ್ನಿಹೋತ್ರಿ, ಡಾ.ಶ್ರೀಶೈಲ ಬಿರಾದಾರ, ಪ್ರೊ.ಗುಂಡಪ್ಪ ಯಾಕಾಪುರ ಸೇರಿದಂತೆ ಅನೇಕರು ಇದ್ದರು.