ಪ್ರೇಯಸಿ ಸುಟ್ಟ ಜಾಗದಲ್ಲೇ ಪ್ರಿಯಕರ ಆತ್ಮಹತ್ಯೆ

ಮೈಸೂರು,ಡಿ.2- ಮೃತ ಪ್ರೇಯಸಿಯನ್ನು ಸುಟ್ಟ ಜಾಗಕ್ಕೆ ಬಂದು ಪ್ರೇಮಿಯೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳದಲ್ಲಿ ನಡೆದಿದೆ.
ಬೆಳಗೊಳದ 20 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಮೃತನ ಸೋದರ ಮಾವ ನೀಡಿದ ದೂರಿನ ಮೇರೆಗೆ ಕೆಆರ್​ಎಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
16 ವರ್ಷದ ಯುವತಿಯನ್ನು ಯುವಕ ಪ್ರೀತಿಸುತ್ತಿದ್ದ. ಮನೆಯಲ್ಲಿ ಇಬ್ಬರ ಪ್ರೀತಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯುವತಿ ವಿಷಪ್ರಾಶನ ಮಾಡಿದ್ದಳು.‌
ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಅಕ್ಟೋಬರ್ 29 ರಂದು ಮೃತಪಟ್ಟಿದ್ದಳು.‌ಇದರಿಂದ‌ ಮನನೊಂದ ಪಾಗಲ್ ಪ್ರೇಮಿ ಮೂರು ದಿನಗಳ ಬಳಿಕ ಪ್ರೇಯಸಿ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ಬಂದು, ತನ್ನ ಸ್ಕೂಟರ್ ನಿಲ್ಲಿಸಿ, ‘ನೀನೇ ಇಲ್ಲದೆ ನಾನು ಏಕೆ ಭೂಮಿ‌ ಮೇಲೆ ಇರಲಿ. ನಿನ್ನ‌ ಬಳಿ ಬರುತ್ತಿರುವೆ. ಜೀವನ‌ ಜುಗುಪ್ಸೆಯಾಗಿದೆ. ನನ್ನ ಸಾವಿಗೆ ನಾನೇ ಕಾರಣ’ ಎಂದು ಡೆತ್ ನೋಟ್ ಬರೆದಿಟ್ಟು, ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.