ಪ್ರೇಯಸಿ ಆತ್ಮಹತ್ಯೆ: ಪ್ರಿಯಕರ ನಾಪತ್ತೆ

ಕಲಬುರಗಿ.ನ.19:ಪ್ರೇಯಸಿಯೊಬ್ಬಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಿಯಕರ ನಾಪತ್ತೆಯಾದ ಘಟನೆ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸೂರುನಾಯಕ್ ತಾಂಡಾದಲ್ಲಿ ವರದಿಯಾಗಿದೆ. ಮೃತ ಯುವತಿಯನ್ನು ಕಾವೇರಿ ಎಂದು ಗುರುತಿಸಲಾಗಿದೆ. ಆಕೆಯ ಪ್ರಿಯಕರ ಸಲಗರ್ ಕಾಲೋನಿ ತಾಂಡಾದ ನಿವಾಸಿ ಮಾನಸಿಂಗ್ ರಾಠೋಡ್ ನಾಪತ್ತೆಯಾಗಿದ್ದಾನೆ.
ಕಾವೇರಿ ಪವಾರ್ ಹಾಗೂ ಮಾನಸಿಂಗ್ ಇಬ್ಬರೂ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಮನೆಯಲ್ಲಿ ಹಿರಿಯರನ್ನು ಒಪ್ಪಿಸಿ ಮದುವೆಯಾಗಲು ಮುಂದಾಗಿದ್ದರು. ಈ ನಡುವೆ ಏನಾಯಿತೋ ಗೊತ್ತಿಲ್ಲ. ಯುವತಿ ಮರಳಿ ಬಾರದ ಲೋಕಕ್ಕೆ ತೆರಳಿದ್ದಾಳೆ.
ಕಳೆದ ಎರಡು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ವಾಸವಿದ್ದ ಮಾನಸಿಂಗ್ ಕಾವೇರಿಯನ್ನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ. ಇಬ್ಬರ ಮನೆಯಲ್ಲಿ ಹಿರಿಯರನ್ನು ಒಪ್ಪಿಸಿ ಮದುವೆ ಮಾಡಿಕೊಳ್ಳಲೆಂದು 20 ದಿನಗಳ ಹಿಂದಷ್ಟೇ ತಾಂಡಾಕ್ಕೆ ಮರಳಿದ್ದ.
ಈ ನಡುವೆ ಯುವತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದಾಗ್ಯೂ, ಯುವತಿಯ ಸಾವಿನ ಬಳಿಕ ಮಾನಸಿಂಗ್ ನಾಪತ್ತೆಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಚಿಂಚೋಳಿ ಪೋಲಿಸರು ತನಿಖೆ ಆರಂಭಿಸಿದ್ದಾರೆ. ತನಿಖೆ ನಂತರವಷ್ಟೇ ನಿಗೂಢವಾಗಿರುವ ಪ್ರಕರಣದ ಹಿನ್ನೆಲೆ ತಿಳಿದುಬರಬೇಕಿದೆ.