ಪ್ರೇಮ ವೈಫಲ್ಯ-ಉಪನ್ಯಾಸಕ ಆತ್ಮಹತ್ಯೆ

ಕಲಬುರಗಿ,ಮೇ.26-ಪ್ರೇಮ ವೈಫಲ್ಯದಿಂದ ನೊಂದ ಉಪನ್ಯಾಸಕರೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಗರದಲ್ಲಿ ನಡೆದಿದೆ.
 ನಗರದ ಲಾಲ್ ಗೇರಿ ಕ್ರಾಸ್ ನಿವಾಸಿ ಅಂಬರೀಶ್ ಸದಾನಂದ ದೇವರಗುಡಿ (33) ಎಂಬುವವರೆ ನಗರದ ಶರಣಬಸವೇಶ್ವರ ಕೆರೆ (ಅಪ್ಪನ ಕೆರೆ)ಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 ನಗರದ ವಿವಿಧ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಅಂಬರೀಶ್ ಅವರು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಪ್ರೇಮ ವೈಫಲ್ಯವೇ ಆತ್ಮಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ.
 ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆಯಿಂದ ಹೊರ ಹೋಗಿದ್ದ ಅಂಬರೀಶ್ ಅವರು ಸಾಯಂಕಾಲವಾದರೂ ಮನೆಗೆ ಬಾರದೇ ಇದ್ದುದ್ದರಿಂದ ಅವರ ಕುಟುಂಬದವರು ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ಸಲ್ಲಿಸಿದ್ದರು.
 ಇಂದು ಬೆಳಿಗ್ಗೆ ನಗರದ ಶರಣಬಸವೇಶ್ವರ ಕೆರೆಯಲ್ಲಿ ಶವ ಪತ್ತೆಯಾಗಿದ್ದು, ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಸ್ಥಳೀಯ ಈಜುಗಾರರು ಶವವನ್ನು ಹೊರ ತೆಗೆದಿದ್ದಾರೆ. ಬ್ರಹ್ಮಪುರ ಪೊಲೀಸ್ ಠಾಣೆಯ ಪಿಐ ಕಪೀಲ್ ದೇವ್ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.