
ಗಾಂಧಿನಗರ,ಆ.೧- ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸುವ ಸಾಧ್ಯತೆಯನ್ನು ತಮ್ಮ ಸರ್ಕಾರ ಅಧ್ಯಯನ ಮಾಡುತ್ತಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.
ಹೆಣ್ಣುಮಕ್ಕಳು ಮದುವೆಗಾಗಿ ಓಡಿಹೋಗುವ ಘಟನೆಗಳ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ “ಅಧ್ಯಯನ” ನಡೆಸುವಂತೆ ಆರೋಗ್ಯ ಸಚಿವ ರುಶಿಕೇಶ್ ಪಟೇಲ್ ಅವರಿಗೆ ಸೂಚಿಸಿದ್ದೇನೆ. ಇದರಿಂದಾಗಿ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಾಧ್ಯವಾಗಲಿದೆ. ಇನ್ನೂ ಮುಂದೆ ಪ್ರೇಮವಿವಾಹಕ್ಕೆ ಪೋಷಕರ ಒಪ್ಪಿಗೆ ಕಡ್ಡಾಯ ಮಾಡಲಾಗುವುದು ಎಂದಿದ್ದಾರೆ.
ಪಾಟಿದಾರ್ ಸಮುದಾಯ ಪ್ರತಿನಿಧಿಸುವ ಸರ್ದಾರ್ ಪಟೇಲ್ ಗ್ರೂಪ್ ಮೆಹ್ಸಾನಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸಂವಿಧಾನ ಅದನ್ನು ಬೆಂಬಲಿಸಿದರೆ, ನಾವು ಈ ಬಗ್ಗೆ ಅಧ್ಯಯನ ನಡೆಸಿ ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನಿಸುತ್ತೇವೆ ಎಂದು ಅವರು ಹೇಳಿದ್ದಾರೆ.
೨೦೨೧ ರಲ್ಲಿ, ರಾಜ್ಯ ಸರ್ಕಾರವು ಗುಜರಾತ್ ಧರ್ಮದ ಸ್ವಾತಂತ್ರ್ಯ ಕಾಯಿದೆಗೆ ತಿದ್ದುಪಡಿ ಮಾಡಿತ್ತು, ಅದು ಮದುವೆಯ ಮೂಲಕ ಬಲವಂತದ ಅಥವಾ ಮೋಸದ ಧಾರ್ಮಿಕ ಮತಾಂತರಗಳಿಗೆ ದಂಡ ವಿಧಿಸಲಿದೆ ಎಂದು ತಿಳಿಸಿದ್ದಾರೆ.
ಈ ತಿದ್ದುಪಡಿಯ ಮೂಲಕ ಒಬ್ಬ ವ್ಯಕ್ತಿಯು ತಪ್ಪಿತಸ್ಥನೆಂದು ಸಾಬೀತಾದರೆ ೧೦ ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸುವ ಅವಕಾಶವಿದೆ. ಗುಜರಾತ್ ಹೈಕೋರ್ಟ್ ನಂತರ ಕಾಯಿದೆಯ ಕೆಲವು ವಿವಾದಾತ್ಮಕ ಸೆಕ್ಷನ್‌ಗಳಿಗೆ ತಡೆ ನೀಡಿತು ಮತ್ತು ಅದರ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು ಆ ಪ್ರಕರಣ ಬಾಕಿ ಉಳಿದಿದೆ.