ಪ್ರೇಮ, ವಿರಹ, ಸಾಮರಸ್ಯದ ಕಾವ್ಯ `ಗಜಲ್’ : ಮಹಿಪಾಲರೆಡ್ಡಿ

ಯಾದಗಿರಿ, ಮೇ. 28:ಪ್ರೇಮ ಅನುರಕ್ತಿಯಲ್ಲಿ ತಲ್ಲಣಿಸುತ್ತಾ, ಏಕತಾನತೆಯಲ್ಲಿ ತನ್ನನ್ನು ಮುಖಾಮುಖಿಯಾಗಿ, ಅಂತರ್ಗತ ಮಧುರ ಯಾತನೆಯ ಪರಮಾವಧಿಯೇ ಗಜಲ್. ಇದು ಪ್ರೇಮ, ವಿರಹದ ಜೊತೆಗೆ ಸಾಮರಸ್ಯದ ಕಾವ್ಯ ಎಂದು ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಎನ್ನಲಾಗುತ್ತದೆ.
ಜಿಲ್ಲೆಯ ಇಬ್ರಾಹಿಂಪುರ ಗ್ರಾಮದ ಸಾಯಿಬಾಬಾ ಮಂದಿರದ ಆವರಣದಲ್ಲಿ ಶಹಾಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ `ಬುದ್ದ ಬಸವ ಅಂಬೇಡ್ಕರ್ ಜನ್ಮದಿನ ಅಂಗವಾಗಿ ನಡೆದ ಕಾವ್ಯ ಮತ್ತು ಕಥಾ ಕಮ್ಮಟ ಶಿಬಿರ’ದಲ್ಲಿ ಗಜಲ್ ಹಾಗೂ ಹೈಕು ಕುರಿತು ಉಪನ್ಯಾಸ ನೀಡಿದ ಅವರು, ಕಲ್ಯಾಣ ಕರ್ನಾಟಕದಲ್ಲಿ 1990 ರ ದಶಕದಲ್ಲಿ ಶಾಂತರಸರು ಹಾಕಿಕೊಟ್ಟ ಕನ್ನಡದ ಗಜಲ್ ಮಾರ್ಗದಲ್ಲಿ ಅನೇಕ ಗಜಲ್‍ಕಾರರು ಹುಟ್ಟಿಕೊಂಡಿದ್ದಾರೆ. ಗಜಲ್ ಆಸಕ್ತಿದಾಯಕ ಕ್ಷೇತ್ರವಾಗಿದೆ ಎಂದರು.
ಗಜಲ್ ಕಾವ್ಯಕ್ಕೆ ದಿವ್ಯ ಚೇತನವಿದೆ. ಅದು ಮೋಹಕ ಕಾವ್ಯ, ಹೆಂಗಳೆಯರ ಪಿಸುನುಡಿ, ಭಾವ ತರಂಗವೆಂದೆಲ್ಲಾ ಗಜಲ್ ಖ್ಯಾತಿ ಪಡೆದಿದೆ. ಗಜಲ್ ಎಂದರೆ ಆಕಾಶ ಬಳಸಿ ಹಾರಿದ ಹಕ್ಕಿಯ ಗರಿಯ ಪರವಶತೆ, ಕಡಲ ಅಲೆಗಳ ಸರತಿಯ ಓಟ, ಫಕೀರನ ಬಿಳಿ ಗಡ್ಡದ ನಡುವೆ ಇರುವ ಚಿಟ್ಟೆ, ಅರಳಿದ ಹೂವಿನ ಸುಗಂಧ ಮತ್ತು ಅಂತರಾಳದ ನೋವು ಒಳಗೊಂಡಿದ್ದೇ ಗಜಲ್ ಎಂದು ಅವರು ಹೇಳಿದರು.
ಬುದ್ಧನ ಕಾರುಣ್ಯ, ಅಂತರ್ಗತ ಪ್ರೇಮದ ಸೆಲೆ, ನಿರಂತರ ಹಪಹಪಿಸುವ ಕಾವ್ಯದ ಉನ್ಮಾದ ಮತ್ತು ಧ್ಯಾನಸ್ಥ ಮನಸ್ಸಿದ್ದಾಗ ಗಜಲ್ ಹುಟ್ಟಲು ಸಾಧ್ಯ. ವರ್ಣನೆಗೆ ದಕ್ಕದ, ಅನುಭವಗಳನ್ನು ಹಂಚಿಕೊಳ್ಳಲಾಗದ, ಅಂತರ್ಮುಖಿ ಸಂವಾದ, ಮೌನದ ಮುಗುಳ್ನಗೆಯೇ ಗಜಲ್. ಕನ್ನಡ ಕಾವ್ಯ ಭಾವವನ್ನು ತಣಿಸುವ, ಅಕ್ಷರಗಳ ಮೂಲಕ ಆತ್ಮಸಖಿಯಾಗಿ ಓದುಗರಿಗೆ ಆಕರ್ಷಿಸುವ ಗಜಲ್ ಎಂಬುದು ಕಾವ್ಯದ ರಾಣಿಯಾಗಿದೆ ಎಂದು ಮಹಿಪಾಲರೆಡ್ಡಿ ಹೇಳಿದರು.
ಹಿರಿಯ ಸಾಹಿತಿಗಳಾದ ಅಮ್ಲಾಯ ಸೈದಾಪುರ, ಬಾಬುರಾವ ದೊರೆ, ಬಾಬುರಾವ್, ಶ್ರೀ ಸಾಯಿಬಾಬಾ ಅಣಬಿ, ಗೌಡಪ್ಪಗೌಡ, ಗಜಲ್‍ಗಾರ್ತಿ ಸುವರ್ಣ ರಾಠೋಡ, ಶರಣಗೌಡ ಚಂದಾಪುರ ವೇದಿಕೆಯಲ್ಲಿದ್ದರು.
ಕಸಾಪ ತಾಲೂಕಾಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ, ಹಿರಿಯ ಲೇಖಕರಾದ ಶಿವಣ್ಣ ಇಜೇರಿ, ಗೋವಿಂದರಾಜ, ಶರಣಬಸವ, ಶಕುಂತಲಾ ಹಡಗಲಿ, ದೇವಿಂದ್ರಪ್ಪ ಹಡಪದ, ಗುರುಲಿಂಗಪ್ಪ ಸಾಗರ, ಮರೆಪ್ಪ ನಾಟೇಕರ್, ಆನಂದ, ಜ್ಯೋತಿ ದೇವಣಗಾಂವ, ತಿಪ್ಪಣ್ಣ ಕ್ಯಾತನಾಳ, ಸುರೇಶ ಅರುಣಿ ಸೇರಿದಂತೆ ಅನೇಕರಿದ್ದರು.

ಎರಡು ದಿನದ ಕಾವ್ಯ ಮತ್ತು ಕಥಾ ಕಮ್ಮಟ ಶಿಬಿರದಲ್ಲಿ ನಾಡಿನ ಅನೇಕ ವಿದ್ವಾಂಸರು, ಸಾಹಿತಿಗಳು ಉಪನ್ಯಾಸ ನೀಡುವ ಮೂಲಕ ಶಿಬಿರಾರ್ಥಿಗಳಿಗೆ ಹೊಸ ದಿಕ್ಕನ್ನು ತೆರೆದಿಟ್ಟಂತಾಯಿತು. ಕ.ಸಾ.ಪ ಶಹಾಪುರ ಘಟಕ ಆಯೋಜಿಸಿದ ಈ ಶಿಬಿರದಲ್ಲಿ ವಿವಿಧ ಗ್ರಾಮದಿಂದ ಶಿಬಿರಾರ್ಥಿಗಳು ಆಗಮಿಸಿ ಲಾಭವನ್ನು ಪಡೆದುಕೊಂಡರು.

ಅಬ್ಬರಿಸುತ್ತಿರುವ ಜಪಾನಿ ಕಾವ್ಯ
ಪುಟ್ಟ ಪುಟ್ಟ ಸಾಲುಗಳಿಂದ ಇಡೀ ಜಗತ್ತಿನ ಸಾಹಿತ್ಯಾಸಕ್ತರ ಮನಸ್ಸನ್ನು ಸೂರೆಗೊಳ್ಳುತಿರುವ ಹೈಕು ಮತ್ತು ತಾಂಕಾ. ಇವು ಕೇವಲ ಕವಿತೆಗಳಲ್ಲ. ಧ್ಯಾನದ ಪ್ರತಿಫಲನ. ಅಪೂರ್ವ ಬದುಕಿನ ಜಂಜಾಟಗಳ ನಡುವೆಯೂ ಪ್ರೇಮೋನ್ಮಾದದ ಮೋಡಿ. ಜಪಾನಿ ಕಾವ್ಯ ಕನ್ನಡದ ನೆಲದಲ್ಲಿ ಅಬ್ಬರಿಸುತ್ತಿದೆ ಎಂದು ಹೈಕು ಮತ್ತು ತಾಂಕಾ ಕಾವ್ಯದ ಕುರಿತು ಹಿರಿಯ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಹೇಳಿದರು.