ಪ್ರೇಮ ಪ್ರಕರಣ: ಚಾಕುವಿನಿಂದ ಇರಿದು ಯುವಕನ ಕೊಲೆ

ಕಲಬುರಗಿ,ನ.16-ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಛೋಟಾ ರೋಜಾ ಬಡಾವಣೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಮೊಹಮ್ಮದ್ ಮುದ್ದಸೀರ್ ತಂದೆ ಅಬ್ದುಲ್ ರಹೀಮ್ (19) ಕೊಲೆಯಾದ ಯುವಕ.
ನಿನ್ನೆ ಮಧ್ಯಾಹ್ನ 4 ಗಂಟೆ ಸುಮಾರಿಗೆ ಬೈಕ್ ಮೇಲೆ ಬಂದ ದುಷ್ಕರ್ಮಿಗಳು ಮೊಹಮ್ಮದ್ ಮುದ್ದಸೀರ್‍ಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿದ್ದರು. ಅವರನ್ನು ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಮೊಹಮ್ಮದ್ ಮುದ್ದಸೀರ್ ಅವರ ತಂದೆ ಅಬ್ದುಲ್ ರಹೀಮ್ ಅವರಿಗೂ ಗಾಯವಾಗಿದೆ ಎಂದು ತಿಳಿದುಬಂದಿದೆ.
ಕೊಲೆಯಾದ ಮೊಹಮ್ಮದ್ ಮುದ್ದಾಸೀರ್ ನಗರದ ಖಾಸಗಿ ಮಹಾವಿದ್ಯಾಲಯದಲ್ಲಿ ಓದುತ್ತಿದ್ದ ಎಂದು ತಿಳಿದುಬಂದಿದ್ದು, ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಕೊಲೆಗೆ ಪ್ರೇಮ ಪ್ರಕರಣವೇ ಕಾರಣವೆನ್ನಲಾಗುತ್ತಿದೆ.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಲ್ಲತ್ ನಗರದ ಅಮೀರ್ ತಂದೆ ಬೇಗ್ ಶಬ್ಬೀರ್ ಅಹ್ಮದ್ ಸೇರಿದಂತೆ ಮತ್ತಿತರರ ವಿರುದ್ಧ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

ಮೂವರ ಬಂಧನ
ನಗರದ ಛೋಟಾ ರೋಜಾ ಬಡಾವಣೆಯಲ್ಲಿ ನಿನ್ನೆ ಮಧ್ಯಾಹ್ನ ನಡೆದ ಮೊಹಮ್ಮದ್ ಮುದ್ದಸೀರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಜಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.