ಪ್ರೇಮ ಪ್ರಕರಣ: ಕೊಲೆಯಲ್ಲಿ ಅಂತ್ಯ

ಬೀದರ:ಎ.21: ತನ್ನ ಸಹೋದರಿಯನ್ನು ಪ್ರೀತಿಸಿದ ಯುವಕನೊಬ್ಬನನ್ನು ಹುಡುಗಿಯ ಸಹೋದರರು ಭೀಕರವಾಗಿ ಕೊಲೆ ಮಾಡಿ ಬಿಸಾಕಿರುವ ಘಟನೆ ತಾಲೂಕಿನ ಖೇಣಿರಂಜೋಳ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಕೊಲೆಯಾಗುವ ಮುನ್ನ ಯುವಕ ತನ್ನ ಸ್ನೇಹಿತನಿಗೆ ಕರೆ ಮಾಡಿದ್ದು ತನ್ನನ್ನು ಕೈಕಾಲು ಕಟ್ಟಿ ಕಾರಂಜಾ ನದಿಯಲ್ಲಿ ಬಿಸಾಕುವ ಯೋಜನೆಯನ್ನು ಕೊಲೆಗಾರರು ಮಾಡಿದ್ದರ ಬಗ್ಗೆ ಹೇಳಿಕೊಂಡಿದ್ದಾನೆ. ತನಗೆ ಒಂದು ಚಾನ್ಸ್ ಕೊಡಿ ಎಂದು ಕೇಳಿಕೊಂಡರೂ ಅವರು ಒಪ್ಪಲಿಲ್ಲ. ತನ್ನ ಕೈಕಾಲು ಸಂಪೂರ್ಣ ಮುರಿದುಹಾಕಿದ್ದಾರೆ. ಈಗ ಸದ್ಯಕ್ಕೆ ನದಿಯಲ್ಲಿ ಬಿಸಾಡಲು ಸಿದ್ಧರಾಗಿರುವುದಾಗಿ ಹೇಳಿ, ಅದನ್ನು ರೆಕಾರ್ಡ್ ಮಾಡಲು ಕೂಡ ಹೇಳಿರುವ ಆಡಿಯೋ ಟೈಮ್ಸ್ ಗೆ ಲಭ್ಯವಾಗಿದೆ.

ಕಣಜಿ ಗ್ರಾಮದ ಆನಂದ (೨೫) ಎಂಬ ಯುವಕನೇ ಕೊಲೆಯಾದ ದುರ್ದೈವಿ. ಯುವತಿಯ ಸಹೋದರರಾದ ಓಮೇಶ ಹಾಗೂ ದೇವಧೂಳಪ್ಪ ಎಂಬುವವರು ಸೇರಿ ಯುವಕನ ಕೈಕಾಲು ಮುರಿದು, ತಲೆಗೆ ಹೊಡೆದು ಕಟ್ಟಿ ಕಾರಂಜಾ ನದಿಗೆ ಬಿಸಾಕಿದ್ದಾರೆನ್ನಲಾಗಿದ್ದು ಪ್ರಕರಣದ ತನಿಖೆ ನಡೆದಿದೆ.