ಪ್ರೇಮ ಪ್ರಕರಣ:ಯುವತಿ ಕುಟುಂಬದವರ ಬೆದರಿಕೆಗೆ ಯುವಕ ಆತ್ಮಹತ್ಯೆ

ಕಲಬುರಗಿ,ಸೆ.4-ಪ್ರೀತಿಸಿದ ಯುವತಿಯ ಕುಟುಂಬದ ಸದಸ್ಯರು ಹಾಕಿದ ಬೆದರಿಕೆಯಿಂದ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬಂಬೂ ಬಜಾರದಲ್ಲಿ ನಡೆದಿದೆ.
ಅಭಿಷೇಕ ಮಲ್ಲಿಕಾರ್ಜುನ ಬಿರಾದಾರ (19) ಆತ್ಯಹತ್ಯೆ ಮಾಡಿಕೊಂಡ ಯುವಕ.
ಅಭಿಷೇಕ ಮತ್ತು ಕಾಳನೂರ ಗ್ರಾಮದ ಯುವತಿಯೊಬ್ಬಳ ನಡುವೆ ಪ್ರೀತಿ ಒಡಮೂಡಿತ್ತು. ಕಳೆದ ಎರಡ್ಮೂರು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಲೂ ನಿರ್ಧರಿಸಿದ್ದರು. ಇದಕ್ಕೆ ಯುವತಿ ಮನೆಯವರ ವಿರೋಧವಿತ್ತು. ಇದೇ ವಿಷಯಕ್ಕೆ ಯುವತಿಯ ತಂದೆ-ತಾಯಿ, ಗ್ರಾಮದ ಚೇರಮನ್ ಮತ್ತು ಕಮಲನಗರದ ಒಬ್ಬ ವ್ಯಕ್ತಿ ಅಭಿಷೇಕನನ್ನು ಕಮಲನಗರ ಹತ್ತಿರ ಕರೆಯಿಸಿ ಯುವತಿಯನ್ನು ಪ್ರೀತಿಸುವುದಾಗಲಿ, ಆಕೆ ಜೊತೆ ಯಾವುದೇ ರೀತಿಯ ಸಂಬಂಧ ಇಟ್ಟುಕೊಳ್ಳುವುದಾಗಿ ಮಾಡಬೇಡ ಎಂದು ಬೆದರಿಕೆ ಹಾಕಿದ್ದರು. ಇದರಿಂದ ಅಭಿಷೇಕ ಮಾನಸಿಕವಾಗಿ ನೊಂದಿದ್ದ. ಇದಾದ ಮೇಲೆ ಒಂದು ದಿನ ಅಭಿಷೇಕ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಅಡುಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಭಿಷೇಕ ಆತ್ಮಹತ್ಯೆಗೆ ಯುವತಿಯ ತಂದೆ-ತಾಯಿ, ಕಾಳನೂರ ಗ್ರಾಮದ ಚೇರ್ಮನ್, ಕಮಲನಗರದ ಒಬ್ಬ ವ್ಯಕ್ತಿಯೇ ಕಾರಣವಾಗಿದ್ದಾರೆ ಎಂದು ಅಭಿಷೇಕ ತಾಯಿ ರತ್ನಮ್ಮ ಮಲ್ಲಿಕಾರ್ಜುನ ಬಿರಾದಾರ ಅವರು ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.