ಪ್ರೇಮಿಗಳ ದಿನದಂದು ಅಯೋಗ್ಯ ಕೃತ್ಯ ತಡೆಯಲು ಆಗ್ರಹಿಸಿ ಪ್ರತಿಭಟನೆ

ಕಲಬುರಗಿ:ಫೆ.12:ಪ್ರೇಮಿಗಳ ದಿನಾಚರಣೆಯಂದು ನಗರದ ವ್ಯಾಪ್ತಿಯಲ್ಲಿ ಅಯೋಗ್ಯ ಕೃತ್ಯಗಳನ್ನು ತಡೆಯಬೇಕು ಎಂದು ಒತ್ತಾಯಿಸಿ ಸೋಮವಾರ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ನಗರದ ಪೋಲಿಸ್ ಆಯುಕ್ತರ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಗರ ಪೋಲಿಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ, ಕಳೆದ ಅನೇಕ ವರ್ಷಗಳಿಂದ ಭಾರತದಂತಹ ಸಾಂಸ್ಕøತಿಕ ದೇಶದಲ್ಲಿ ಫೆಬ್ರವರಿ 14ನ್ನು ಹೊರದೇಶದಿಂದ ಬಂದ ಪದ್ದತಿಯಾದ ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತಿದ್ದು, ವ್ಯವಹಾರಿಕ ಲಾಭ ಗಳಿಸುವ ಉದ್ದೇಶದಿಂದ ಪಾಶ್ಚಾತ್ಯರ ಅಂಧಾನುಕರಣೆಯು ದೇಶದ ಯುವಕ ಹಾಗೂ ಯುವತಿಯರ ಅನೈತಿಕತೆ ಹಾಗೂ ಸ್ವೇಚ್ಛಾಚಾರಕ್ಕೆ ಕಾರಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪಾಶ್ಚಾತ್ಯರ ಪ್ರೇಮಿಗಳ ದಿನವು ಯುವತಿಯರನ್ನು ಪೀಡಿಸುವ ಮತ್ತು ಅವರಿಗೆ ಹಿಂಸೆ ನೀಡುವ ಮತ್ತು ಲೈಂಗಿಕ ಕಿರುಕುಳ ಕೊಡುವ ದಿನವಾಗಿ ಆಚರಿಸುತ್ತಿರುವುದು ಖೇದನೀಯವಾಗಿದೆ. ಅಂದು ಪಾರ್ಟಿ ಹೆಸರಿನಲ್ಲಿ ಯುವಕ, ಯುವತಿಯರು ಮದ್ಯಪಾನ, ಧೂಮಪಾನ ಮಾಡುವುವುದ ಡ್ರಗ್ಸ್ ಮಾಫಿಯಾದಂತಹ ಕೃತ್ಯಗಳಿಗೆ ಬಲಿಯಾಗುವುದು ಮುಂತಾದ ಅನುಚಿತ ಘಟನೆಗಳು ಸಂಭವಿಸುತ್ತವೆ ಅಲ್ಲದೇ ಆ ದಿನ ಸಮೀಕ್ಷೆ ಪ್ರಕಾರ ಗರ್ಭನಿರೋಧಕ ಮಾರಾಟ ಅಧಿಕವಾಗಿದೆ. ಇದು ಅನೈತಿಕ ಹೆಚ್ಚಳಕ್ಕೆ ಸಾಕ್ಷಿಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಆ ದಿನ ಯುವತಿಯರಿಗೆ ಆಕರ್ಷಿಸಲು ವೇಗವಾಗಿ ವಾಹನಗಳನ್ನು ಚಲಾಯಿಸಲಾಗುತ್ತಿದೆ. ಹಾಗಾಗಿ ಆ ದಿನವು ಶಾಲಾ, ಕಾಲೇಜುಗಳ ಶೈಕ್ಷಣಿಕ ವಾತಾವರಣ ಹಾಳಾಗುವುದಲ್ಲದೇ ಕಾನೂನು ಸುವ್ಯವಸ್ಥೆಯ ಪ್ರಶ್ನೆ ನಿರ್ಮಾಣವಾಗುತ್ತದೆ. ಆದ್ದರಿಂದ ಇಂತಹ ಅಯೋಗ್ಯ ಕೃತ್ಯಗಳನ್ನು ತಡೆಯಲು ಸಾರ್ವಜನಿಕ ಸ್ಥಳಗಳಲ್ಲಿ ಅಂದು ಜನಜಾಗೃತಿ ಅಭಿಯಾನ ಮಾಡುವ ಮೂಲಕ ತಡೆಯಬೇಕು ಎಂದು ಅವರು ಒತ್ತಾಯಿಸಿದರು.
ಪ್ರೇಮಿಗಳ ದಿನಾಚರಣೆಯಂದು ವಿಶೇಷ ಪೋಲಿಸ್ ದಳ ರಚಿಸಿ ಶಾಲಾ, ಕಾಲೇಜುಗಳಲ್ಲಿ ಅನುಚಿತ ಕೃತ್ಯ ಎಸಗುವ, ಅತೀ ವೇಗದಿಂದ ವಾಹನಗಳನ್ನು ಚಲಾಯಿಸುವವರ ವಿರುದ್ಧ ಕ್ರಮ ಜರುಗಿಸುವಂತೆ, ತಪ್ಪುಗಳನ್ನು ಮಾಡಲಾಗುತ್ತಿರುವ ಸಾರ್ವಜನಿಕ ಉದ್ಯಾನವನಗಳಲ್ಲಿ ಅಯೋಗ್ಯ ಕೃತ್ಯಗಳನ್ನು ತಡೆಯಲು ಕ್ರಮ ಕೈಗೊಳ್ಳುವಂತೆ, ಇಂತಹ ಅಯೋಗ್ಯ ದಿನಾಚರಣೆಯನ್ನು ಶಾಲಾ, ಕಾಲೇಜುಗಳಲ್ಲಿ ಆಚರಿಸದಂತೆ ಸೂಕ್ತ ನಿರ್ದೇಶನ ನೀಡುವಂತೆ, ಪಬ್, ಕೆಫೆಗಳಲ್ಲಿ ಕೂಡ ಇಂತಹ ಅಯೋಗ್ಯ ಕೃತ್ಯಗಳು ನಡೆಯುವ ಸಾಧ್ಯತೆ ಇದ್ದು, ಅವುಗಳ ಮೇಲೆಯೂ ನಿಗಾ ವಹಿಸುವಂತೆ, ಸಾರ್ವಜನಿಕ ಸ್ಥಳಗಳಾದ ಸಾರ್ವಜನಿಕ ಉದ್ಯಾನವನ, ಜಿಲ್ಲಾ ವಿಜ್ಞಾನ ಕೇಂದ್ರ, ಬುದ್ಧ ಮಂದಿರ, ನಾಗನಹಳ್ಳಿ ಉದ್ಯಾನವನ ಮುಂತಾದೆಡೆ ಪೋಲಿಸರನ್ನು ನಿಯೋಜಿಸಿ ಯುವಕ, ಯುವತಿಯರಿಗೆ ಬುದ್ದಿವಾದ ಹೇಳುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ್ ಸ್ವಾದಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಗರ ಅಧ್ಯಕ್ಷ ದಶರಥ್ ಇಂಗೋಳೆ, ಉತ್ತರ ವಲಯದ ಅಧ್ಯಕ್ಷ ಮಹಾದೇವ್ ಕೋಟ್ನೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ಕಂದಗಲ್, ನಗರ ಪ್ರಮುಖ ಪ್ರಕಾಶ್ ವಾಘಮೋರೆ, ಉತ್ತರ ವಲಯದ ಉಪಾಧ್ಯಕ್ಷ ರಾಜು ಸ್ವಾಮಿ, ಕಾರ್ಯದರ್ಶಿ ರಾಕೇಶ್ ಮಠ್, ಜಿಲ್ಲಾ ಗೌರವಾಧ್ಯಕ್ಷ ನಂದಕುಮಾರ್ ನಾಯಕ್, ರಾಜು ಕಮಲಾಪುರ ಮುಂತಾದವರು ಪಾಲ್ಗೊಂಡಿದ್ದರು.