ಪ್ರೇಮಿಗಳ ಒಂದು ಮಾಡಿ ಒಟ್ಟಿಗಿರಲು ಅಸ್ತು ಎಂದ ಜಾರ್ಖಂಡ್ ಹೈಕೋರ್ಟ್

ರಾಂಚಿ(ಜಾರ್ಖಂಡ್),ಸೆ.೧೩-ಕುಟುಂಬಸ್ಥರ ವಿರೋಧದ ನಡುವೆಯೂ ಪ್ರಿಯಕರನೊಂದಿಗೆ ಬಾಳಲು ಇಚ್ಚಿಸಿದ ಯುವತಿಗೆ ಹೈಕೋರ್ಟ್ ಅಸ್ತು ಎಂದಿದ್ದು, ಆಕೆ ಪ್ರೀತಿಸುತ್ತಿರುವ ಯುವಕನೊಂದಿಗೆ ಬದುಕುವ ಹಕ್ಕಿದೆ ಎಂದು ಹೇಳಿದೆ. ರಾಜ್ಯದ ಯುವಕನೊಬ್ಬ ತನ್ನಿಂದ ಪ್ರಿಯತಮೆಯನ್ನು ಆಕೆಯ ಕುಟುಂಬಸ್ಥರು ದೂರ ಮಾಡಿದ್ದಾರೆ. ಆಕೆಯನ್ನು ನನ್ನೊಂದಿಗೆ ಬದುಕಲು ಬಿಡಿ ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ವಯಸ್ಕ ಯುವತಿ ತನ್ನ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ. ಹೀಗಾಗಿ ಆಕೆ ತನ್ನ ಪ್ರಿಯಕರನೊಂದಿಗೆ ಜೀವಿಸಲು ಅನುವು ಮಾಡಿಕೊಡಬೇಕು ಎಂದು ಆದೇಶಿಸಿದೆ.
ಕುಟುಂಬಸ್ಥರ ವಿರೋಧದಿಂದ ಬಹಳ ದಿನಗಳಿಂದ ದೂರ ಇದ್ದ ಪ್ರೇಮಿಗಳು ಕೋರ್ಟ್‌ನ ಮಧ್ಯಸ್ಥಿಕೆಯಲ್ಲಿ ಭೇಟಿಯಾಗಿದ್ದಲ್ಲದೇ, ಒಟ್ಟಿಗೆ ಬಾಳಲು ಅವಕಾಶ ಪಡೆದರು. ಇಬ್ಬರಿಗೂ ಭದ್ರತೆ ಒದಗಿಸುವಂತೆ ಸ್ಥಳೀಯ ಪೊಲೀಸ್ ಠಾಣೆಗೆ ನ್ಯಾಯಾಲಯ ಸೂಚಿಸಿದೆ.
ಪ್ರಕರಣದ ವಿವರ:
ಪ್ರೇಮಿ ಪ್ರತಾಪ್ ಎಕ್ಕಾ ಎನ್ನುವವರು ತನ್ನ ಪ್ರಿಯತಮೆ ಕಾಣೆಯಾಗಿದ್ದಾಳೆ ಎಂದು ಜಾರ್ಖಂಡ್ ಹೈಕೋರ್ಟ್‌ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅಲ್ಲದೇ, ಆಕೆಯ ಜೊತೆ ಬದುಕಲು ಬಯಸಿ, ಅವಳನ್ನು ಮದುವೆಯಾಗಲು ಇಚ್ಚಿಸಿದ್ದರು.ಆದರೆ, ಹುಡುಗಿಯ ಮನೆಯವರು ಒಪ್ಪುತ್ತಿಲ್ಲ. ಕುಟುಂಬಸ್ಥರು ಆಕೆಯನ್ನು ಭೇಟಿಯಾಗಲು ಬಿಡದೇ ಬಲವಂತವಾಗಿ ತಮ್ಮ ಮನೆಯಲ್ಲಿಯೇ ಕೂಡ ಹಾಕಿದ್ದಾರೆ. ಮೊಬೈಲ್‌ನಲ್ಲಿ ಮಾತನಾಡಲು ಬಿಡುತ್ತಿಲ್ಲ. ಇಬ್ಬರೂ ವಯಸ್ಕರಾದ ಕಾರಣ ತಮ್ಮನ್ನು ಒಂದು ಮಾಡಬೇಕು ಎಂದು ಕೋರಿದ್ದರು.