ಪ್ರೇಮಗೀತೆಯ ಕವಿಗೆ ನಮನ

ಕಲಬುರಗಿ , ಜೂ. 11: ದಲಿತ ಕವಿ ಎಂದೇ ಖ್ಯಾತಿ ಪಡೆದ ಕನ್ನಡದ ಮಹತ್ವದ ಕವಿ ಸಿದ್ದಲಿಂಗಯ್ಯ ಅವರು ಪ್ರೇಮಕವಿಯೂ ಆಗಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಲಬುರಗಿ ಮಾಜಿ ಜಿಲ್ಲಾ ಅಧ್ಯಕ್ಷ ಹಾಗೂ ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಹೇಳಿದ್ದಾರೆ.
ಸಿದ್ದಲಿಂಗಯ್ಯ ಅವರ ನಿಧನಕ್ಕೆ‌ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಅವರು, ಇಕ್ಕರ್ಲಾ ಒದಿರ್ಲಾ ಎಂಬ ಕವಿತೆ ಬರೆದು ಖ್ಯಾತಿ ಪಡೆದಿದ್ದ ಸಿದ್ದಲಿಂಗಯ್ಯನವರು, ‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ ‘ ಎಂಬ ಪ್ರೇಮಗೀತೆಯನ್ನು ಬರೆದಿದ್ದರು ಮತ್ತು ಅದು ಸಿನಿಮಾದಲ್ಲಜ ಬಳಕೆಯಾಗಿ ಜನಪ್ರಿಯವಾಯಿತು ಎಂದಿದ್ದಾರೆ.‌
ಅಖಿಕ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಂದರ್ಭದಲ್ಲಿ ಕಸಾಪ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ಕಲಬುರಗಿ ಜಿಲ್ಲೆಯ ಪ್ರತಿನಿಧಿಯಾಗಿದ್ದದ್ದು ಹೆಮ್ಮೆಯ ಸಂಗತಿ ಎಂದ ಅವರು, ರಾಜ್ಯ ಕಸಾಪ ಅಧ್ಯಕ್ಷರಾಗಿದ್ದ ಪುಂಡಲೀಕ ಹಾಲಂಬಿ ಅವರೊಂದಿಗೆ ಸಿದ್ದಲಿಂಗಯ್ಯ ಅವರ ಮನೆಗೆ ತೆರಳಿ ಅಭಿನಂದಿಸುವ ಅವಕಾಶ ದೊರಕಿತ್ತು. ಸಮ್ಮೇಳನದ ಸಂದರ್ಭದಲ್ಲಿ ನಾಲ್ಕು ದಿನ ಅವರೊಟ್ಟಿಗೆ ಇರುವ ಭಾಗ್ಯವೂ ಸಿಕ್ಕಿತ್ತು ಎಂದು ಮಹಿಪಾಲರೆಡ್ಡಿ ನೆನಪಿಸಿಕೊಂಡಿದ್ದಾರೆ.‌ಅವರ ನಿಧನದಿಂದಾಗಿ ಸಾಹಿತ್ಯಲೋಕ ಧೀಮಂತ ಲೇಖಕರನ್ನು ಕಳೆದುಕೊಂಡಂತಾಗಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.