ಪ್ರೇಮಕ್ಕೆ ವಿರೋಧ ಅಪ್ರಾಪ್ತೆ ಆತ್ಮಹತ್ಯೆ

(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು,ಫೆ.೯-ಪ್ರೀತಿಗೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬೇಸತ್ತ ಅಪ್ರಾಪ್ತ ಬಾಲಕಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾನ್ವಿ ಪಟ್ಟಣದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಅಪ್ರಾಪ್ತ ಬಾಲಕಿಯನ್ನು ಸಂಗೀತಾ (೧೭) ಎಂದು ಗುರುತಿಸಲಾಗಿದೆ. ಅಪ್ರಾಪ್ತ ವಯಸ್ಸಿನ ಸಂಗೀತಾ ಕಾರು ಚಾಲಕ ಕೃಷ್ಣ ಎನ್ನುವವನನ್ನು ಪ್ರೀತಿಸುತ್ತಿದ್ದಳು. ಈ ಹಿಂದೆ ಎರಡು ಬಾರಿ ಚಾಲಕ ಕೃಷ್ಣನೊಂದಿಗೆ ಬಾಲಕಿ ಮನೆ ಬಿಟ್ಟು ಓಡಿ ಹೋಗಿದ್ದಳು. ನಂತರ ಪೋಷಕರು ಈ ಜೋಡಿಯನ್ನು ಹುಡುಕಿ ಬುದ್ಧಿವಾದ ಹೇಳಿ ಮನೆಗೆ ಕರೆ ತಂದಿದ್ದರು.
ಮನೆಗೆ ಬಂದ ಮೇಲೂ ಮತ್ತೆ ಕೃಷ್ಣನೊಂದಿಗೆ ಪ್ರೇಮದಲ್ಲಿ ಬಿದ್ದಿದ್ದ ಬಾಲಕಿ ಸಂಗೀತಾಗೆ ಪೋಷಕರು ಬುದ್ಧಿ ಹೇಳಿದ್ದಾರೆ ಹಾಗೂ ಅವನಿಂದ ದೂರವಿರುವಂತೆ ತಿಳಿ ಹೇಳಿದ್ದಾರೆ.ಆದರೆ, ಪೋಷಕರ ಮಾತಿಗೆ ಬೇಸತ್ತ ಬಾಲಕಿ ಸಂಗೀತಾ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸದ್ಯ ಶವವನ್ನು ಮಾನ್ವಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.