ಪ್ರೇಮಂ ಪೂಜ್ಯಂಗೆ ಎಲ್ಲೆಡೆ ಉತ್ತಮ ಪ್ರಶಂಸೆ

ನೆನಪಿರಲಿ ಖ್ಯಾತಿಯ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ 25ನೇ ಚಿತ್ರ ” ಪ್ರೇಮಂ ಪೂಜ್ಯಂ’ ಕಳೆದ ವಾರ ಬಿಡುಗಡೆ ಯಾಗಿದ್ದು ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಇದು ಸಹಜವಾಗಿಯೇ ಚಿತ್ರತಂಡದ ಮುಖದಲ್ಲಿ ಮಂದಹಾಸ ಮನೆ ಮಾಡಿದೆ.

325 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರೇಮಂ ಪೂಜ್ಯಂ ತೆರೆಗೆ ಬಂದಿದೆ. ಎಲ್ಲಾ ಕಡೆ ಚಿತ್ರ ನೋಡಿದ ಮಂದಿ ಮೆಚ್ಚುಗೆಯ ಮಹಾಪೂರ ಹರಿಸುತ್ತಿದ್ದಾರೆ. ಇದೇ ಖುಷಿಯಲ್ಲಿ ಚಿತ್ರತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಪತ್ರಿಕಾಗೋಷ್ಠಿ ಕರೆದಿತ್ತು .

ಈ ವೇಳೆ ಮಾತಿಗಿಳಿದ ನಟ ಪ್ರೇಮ್ , ಕೆಲವು ಮಂದಿ ಮಾತ್ರ ಚಿತ್ರ ಉದ್ದ ವಾಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ ಅದನ್ನು ಹೊರತುಪಡಿಸಿ ಚಿತ್ರಮಂದಿರದಲ್ಲಿ ಚಿತ್ರ ನೋಡಿದ ಎಲ್ಲರೂ ಉತ್ತಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಇದು ನಿಜಕ್ಕೂ ಖುಷಿಯ ಸಂಗತಿ ಎಂದರು.

ಹೊಸ ರೂಪದಲ್ಲಿ ಚಿತ್ರವನ್ನು ತೆರೆಗೆ ತಂದಿದ್ದೇವೆ ಇದಕ್ಕೆ ಪ್ರೇಕ್ಷಕರಿಂದಲೂ ಮೆಚ್ಚುಗೆ ಸಿಕ್ಕಿದೆ. ಚಿತ್ರದ ಯಶಸ್ಸು ಇಡೀ ತಂಡಕ್ಕೆ ಖುಷಿಕೊಟ್ಟಿದೆ ಎಂದು ಹೇಳಿಕೊಂಡರು. ಕಾರ್ಯಕಾರಿ ನಿರ್ಮಾಪಕ ಮಾಧವ್, ಇದುವರೆಗೂ 3000ಕ್ಕೂ ಹೆಚ್ಚು ಪ್ರದರ್ಶನ ನಡೆದಿದ್ದು ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ನೋಡಿದ ಹಳೆಯ ಮಂದಿ ಇದು ನಮ್ಮ ಬದುಕಿನ ಕಥೆಯೇ ಎಂದು ಹೇಳಿದ್ದಾರೆ ಈ ರೀತಿಯ ಅಭಿಪ್ರಾಯ ಕಂಡು ಚಿತ್ರನಿರ್ಮಾಣ ಮಾಡಿದ್ದಕ್ಕೆ ಸಾರ್ಥಕವಾಗಿದೆ ಎಂದರು.

ನಿರ್ದೇಶಕ ಡಾ.ರಾಘವೇಂದ್ರ, ಪ್ರೇಮಿಗಳಿಗಾಗಿ ತೆಗೆದ ಚಿತ್ರವನ್ನು ಎಲ್ಲ ವರ್ಗದ ಜನರು ಇಷ್ಟಪಟ್ಟು ನೋಡುತ್ತಿದ್ದಾರೆ ಸಂತೋಷಕ್ಕೆ ಕಾರಣವಾಗಿದೆ. ರಾಜ್ಯದ ಕೆಲವು ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ಸಿಗದೆ ಜನರು ವಾಪಸ್ ಹೇಳುತ್ತಿರುವ ವಿಷಯ ಕೇಳಿ ಇನ್ನಷ್ಟು ಖುಷಿಯಾಗಿದೆ. ಚಿತ್ರಕ್ಕೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಮೂಡಿಬರುತ್ತಿದೆ ಎಂದರು.

ಚಿತ್ರದ ಮತ್ತೊಬ್ಬ ನಿರ್ಮಾಪಕರಲ್ಲಿ ಒಬ್ಬರಾದ ಡಾ. ಅಂಜನ್ ಕುಮಾರ್, ಚಿತ್ರಕ್ಕೆ ಸಿಗುತ್ತಿರುವ ಬೆಂಬಲ ಕಂಡು ಖುಷಿ ವ್ಯಕ್ತಪಡಿಸಿದರು.