ಪ್ರೇಗ್ ವಿವಿಯಲ್ಲಿ ಭೀಕರ ಗುಂಡಿನ ದಾಳಿ: ೧೫ ಸಾವು

ಪ್ರೇಗ್ (ಜೆಕ್ ಗಣರಾಜ್ಯ), ಡಿ.೨೨- ಅಮೆರಿಕಾದಲ್ಲಿ ಸಾಮಾನ್ಯವಾಗಿ ನಡೆಯುತ್ತಿರುವ ಗುಂಡಿನ ದಾಳಿಯ ಪ್ರಕರಣ ಇದೀಗ ಯುರೋಪ್‌ನ ರಾಷ್ಟ್ರವೊಂದರಲ್ಲಿ ಸಂಭವಿಸಿದೆ. ಜೆಕ್ ಗಣರಾಜ್ಯದ ಪ್ರೇಗ್‌ನ ವಿಶ್ವವಿದ್ಯಾನಿಲಯದಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ೧೫ ಮಂದಿ ಮೃತಪಟ್ಟು, ೨೫ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ಜೆಕ್ ಗಣರಾಜ್ಯದಲ್ಲಿ ಒಂದು ದಿನದ ಶೋಕಾಚರಣೆಗೆ ಕರೆ ನೀಡಲಾಗಿದೆ. ದೇಶದ ದಶಕದ ಇತಿಹಾಸದಲ್ಲೇ ಅತ್ಯಂತ ಕರಾಳ ಎನಿಸಿದ ಈ ದಾಳಿಯ ರೂವಾರಿಯನ್ನು ಗುಂಡಿಟ್ಟು ಸಾಯಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭೀಕರ ಗುಂಡಿನ ದಾಳಿ ಹಿನ್ನೆಲೆಯಲ್ಲಿ ಜೆಕ್ ಗಣರಾಜ್ಯದ ವಿಶೇಷ ಕ್ಯಾಬಿನೆಟ್ ಸಭೆಯ ನಂತರ ಅಧ್ಯಕ್ಷ ಪೆಟ್ರ್ ಪಾವೆಲ್ ಅವರು ಡಿಸೆಂಬರ್ ೨೩ರಂದು ಶೋಕಾಚರಣೆಯ ಭಾಗವಾಗಿ ಸರ್ಕಾರಿ ಕಟ್ಟಡಗಳ ಮೇಲಿನ ಧ್ವಜವನ್ನು ಅರ್ಧಕ್ಕೆ ಇಳಿಸಲಾಗುವುದು ಮತ್ತು ನಾಗರಿಕರು ಮಧ್ಯಾಹ್ನ ಒಂದು ನಿಮಿಷ ಮೌನವನ್ನು ಆಚರಿಸಲು ಮನವಿ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾವೆಲ್, ಅನೇಕ ಯುವ ಜೀವಗಳ ಅನಗತ್ಯ ನಷ್ಟದ ಬಗ್ಗೆ ಅಸಹಾಯಕ ಕೋಪದ ಜೊತೆಗೆ ನನ್ನ ದುಃಖವನ್ನು ವ್ಯಕ್ತಪಡಿಸುತ್ತೇನೆ. ಜೆಕ್ ಗಣರಾಜ್ಯದ ಇತಿಹಾಸದಲ್ಲಿ ಅತ್ಯಂತ ದುರಂತವಾದ ಈ ದುರಂತ ಘಟನೆಯಲ್ಲಿ ಸಂತ್ರಸ್ತರ ಎಲ್ಲಾ ಸಂಬಂಧಿಕರಿಗೆ ನನ್ನ ಪ್ರಾಮಾಣಿಕ ಸಂತಾಪವನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಬಂದೂಕುಧಾರಿ ಯುವಕನೊಬ್ಬ ಪ್ರೇಗ್ ವಿಶ್ವವಿದ್ಯಾನಿಲಯ ಆವರಣದಲ್ಲಿ ಗುಂಡಿನ ದಾಳಿ ನಡೆಸಿ ಕನಿಷ್ಠ ೧೫ ಮಂದಿಯನ್ನು ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಈ ಭಯಾನಕ ದಾಳಿಯ ಬೆನ್ನಲ್ಲೇ ನಗರದ ಈ ಐತಿಹಾಸಿಕ ಕೇಂದ್ರವನ್ನು ಜನ ತೊರೆಯುತ್ತಿದ್ದು, ಸಶಸ್ತ್ರ ಪೊಲೀಸರು ಇಡೀ ಆವರಣವನ್ನು ಸುತ್ತುವರಿದಿದ್ದಾರೆ. ನಾಗರಿಕರು ಮನೆಗಳ ಒಳಗೆಯೇ ಇರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಐತಿಹಾಸಿಕ ೧೪ನೇ ಶತಮಾನದ ಚಾರ್ಲ್ಸ್ ಬ್ರಿಡ್ಜ್ ಬಳಿ ಇರುವ ಚಾರ್ಲ್ಸ್ ಯುನಿವರ್ಸಿಟಿಯ ಕಲಾ ವಿಭಾಗದಲ್ಲಿ ಈ ದಾಳಿ ನಡೆದಿದೆ. ಘಟನೆಯಲ್ಲಿ ೧೫ ಮಂದಿ ಮೃತಪಟ್ಟಿದ್ದು, ಇತರ ೨೪ ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ಮಾರ್ಟಿನ್ ವೊಂಡ್ರೆಸ್ಕ್ ವಿವರಿಸಿದ್ದಾರೆ.