ಪ್ರೇಕ್ಷಕರ ಮನ ಸೋರೆಗೊಂಡ ಸೀತಾಪಹರಣ ನಾಟಕ


ಸಂಜೆವಾಣಿ ವಾರ್ತೆ
ಸಿರಿಗೇರಿ ಫೆ 26. ಸಿರಿಗೇರಿ ಗ್ರಾಮದ ಶ್ರೀ ನಾಗನಾಥೇಶ್ವರ ದೇವಸ್ಥಾನ ಆವರಣದಲ್ಲಿ, ನಿನ್ನೆ ಸಂಜೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಧಾತ್ರಿ ರಂಗಸಂಸ್ಥೆ ಸಿರಿಗೇರಿ ಇವರ ಸಹಯೋಗದಲ್ಲಿ, ಧಾತ್ರಿ ರಂಗ ಸಂಸ್ಥೆಯ ಎಂಟನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ಸೀತಾಪಹರಣ ನಾಟಕ, ಬಯಲಾಟ ಹಾಗೂ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಸಿರುಗುಪ್ಪ ಶಾಸಕರಾದ ಎಂ ಎಸ್ ಸೋಮಲಿಂಗಪ್ಪ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ  ಪೂಜಾರಿ ಲಕ್ಷ್ಮಮ್ಮ ಕರಿಯಪ್ಪ, ತಾಸಿಲ್ದಾರ್ ಮಂಜುನಾಥ ಸ್ವಾಮಿ ಇವರುಗಳು ನಗಾರಿ ಬಾರಿಸುವ ಮೂಲಕ ಉದ್ಘಾಟನೆಗೊಳಿಸಿದರು. ಪ್ರಾರ್ಥನೆಯ ನಂತರ ಧಾತ್ರಿ ರಂಗಸಂಸ್ಥೆಯ ಕಾರ್ಯದರ್ಶಿ ಕಲಾವಿದ ಮಂಜುನಾಥ ಪ್ರಾಸ್ತಾವಿಕ ಮಾತನಾಡಿ ತಮ್ಮ ಸಂಸ್ಥೆಯಿಂದ ಹಮ್ಮಿಕೊಂಡ ರಾಜ್ಯಮಟ್ಟದ, ಜಿಲ್ಲಾಮಟ್ಟಗಳಲ್ಲಿ ನೀಡಿದ ನಾಟಕ ಪ್ರದರ್ಶನ, ಸರ್ಕಾರಿ ಯೋಜನೆಗಳ  ಪ್ರಾಯೋಜಿತ ಬೀದಿ ನಾಟಕ, ನೃತ್ಯ ರೂಪಕಗಳು ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ. ತಮ್ಮ ಸಂಸ್ಥೆಯ 8 ವರ್ಷಗಳ ಹಾದಿಯಲ್ಲಿ ಸರ್ಕಾರದ ವತಿಯಿಂದ ಮತ್ತು ಸ್ಥಳೀಯ ಮುಖಂಡರು ರಾಜಕಾರಣಿಗಳು ಮತ್ತು ಸರ್ಕಾರದ ಅಧಿಕಾರಿಗಳ ವತಿಯಿಂದ ನೀಡಿದ ಸಹಕಾರವನ್ನು ನೆನೆದರು. ಇನ್ನೂ ಹೆಚ್ಚಿನ ಕಲಾವಿದರನ್ನು ತಯಾರಿಸಿ ರಾಜ್ಯಮಟ್ಟದಲ್ಲಿ ಮತ್ತು ದೇಶ ಮಟ್ಟದಲ್ಲಿ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಲು ಮುಂದೆಯೂ ಸಹಕರಿಸಬೇಕೆಂದು ಕೋರಿದರು. ನಂತರ ಶಾಸಕ ಎಂಎಸ್ ಸೋಮಲಿಂಗಪ್ಪ ಮಾತನಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ, ಬಯಲಾಟಗಳು ಜನರಿಗೆ ಸಂತೋಷವನ್ನು ನೀಡುವ ಶಕ್ತಿಯನ್ನು ಹೊಂದಿವೆ, ಸಿರಿಗೇರಿ ಅಂತಹ ಗ್ರಾಮೀಣ ಮಟ್ಟದಲ್ಲಿ ಧಾತ್ರಿ ರಂಗ ಸಂಸ್ಥೆಯು ತನ್ನದೇ ಆದ ಗ್ರಾಮೀಣ ಪ್ರತಿಭೆಗಳ ಕಲಾವಿದರನ್ನು ಹೊಂದಿ ರಾಜ್ಯಮಟ್ಟದಲ್ಲಿ ಕಾರ್ಯಕ್ರಮಗಳನ್ನು ನೀಡಿ ಹೆಸರು ಮಾಡಿರುವುದು ನಮ್ಮ ತಾಲೂಕಿಗೆ ಹೆಮ್ಮೆಯ ವಿಷಯ. ಈ ರೀತಿಯ ಯುವಕರ ಪ್ರತಿಭೆಯನ್ನು ಗುರುತಿಸಿ ಮತ್ತು ಬಯಲಾಟ ನಾಟಕ ಕಲಾವಿದರನ್ನು ಪ್ರೋತ್ಸಾಹಿಸಿ ಮುಂದೆ ಬೆಳೆಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು. ತಾಸಿಲ್ದಾರ್ ಮಂಜುನಾಥ ಸ್ವಾಮಿ ಮಾತನಾಡಿ ಸಂಸ್ಥೆಯ ಕಲಾವಿದರಿಂದ ಸರ್ಕಾರದ ಪ್ರಾಯೋಜಿತ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕಗಳನ್ನು ಪ್ರದರ್ಶಿಸಿ ಸಾಮಾಜಿಕ ಬದ್ಧತೆ ಮೆರೆದಿದ್ದಾರೆ. ಸಾಮಾಜಿಕ ಕಳಕಳಿಯನ್ನು ಹೊಂದಿ ಪ್ರಾಚೀನ ಕಾಲದ ಕಲೆಯನ್ನು ಉಳಿಸಿಕೊಂಡು ಹೋಗುತ್ತಿರುವ ಇಂತಹ ಸಂಸ್ಥೆಗಳಿಗೆ, ಕಲಾವಿದರಿಗೆ ಎಲ್ಲರೂ ಸಹಕರಿಸಬೇಕೆಂದು ಕೋರಿದರು.  ಕಾರ್ಯಕ್ರಮದಲ್ಲಿ ಶಾಸಕರನ್ನು ಅಧಿಕಾರಿಗಳನ್ನು ಮತ್ತು ಸ್ಥಳೀಯ ಪ್ರಜಾಪ್ರತಿನಿಧಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ ಸೀತಾಪ ಹರಣ ನಾಟಕವು ಜನರ ಮೆಚ್ಚುಗೆಯನ್ನು ಪಡೆದು ಜನರ ಮನಸ್ಸನ್ನು ಸೋರೆಗೊಂಡಿದ್ದು ವಿಶೇಷವಾಗಿತ್ತು, ಬಯಲಾಟ ನೃತ್ಯ ರೂಪಕಗಳು ಜನರ ಮೆಚ್ಚುಗೆಯನ್ನು ಪಡೆದು, ಅಭಿನಯಿಸಿದ ಕಲಾವಿದರಿಗೆ ಶಹಭಾಷಗಿರಿಯನ್ನು ಪ್ರೇಕ್ಷಕರು ನೀಡಿದರು. ಕಾರ್ಯಕ್ರಮದಲ್ಲಿ ಕಲಾವಿದರು ಗ್ರಾಮದ ಹಿರಿಯ ಮುಖಂಡರು, ಪ್ರಜಾ ಪ್ರತಿನಿಧಿಗಳು, ಧಾತ್ರಿ ರಂಗ ಸಂಸ್ಥೆಯ ಪದಾಧಿಕಾರಿಗಳು, ಸಿರಿಗೇರಿ ಮತ್ತು ಸುತ್ತಲಿನ ಗ್ರಾಮಗಳ ಕಲಾಸಕ್ತರು ಪಾಲ್ಗೊಂಡಿದ್ದರು. ಕಸಾಪ  ತಾಲೂಕು ಮಾಜಿ ಅಧ್ಯಕ್ಷ ಎಸ್ಎಂ ನಾಗರಾಜ ಸ್ವಾಮಿ ಕಾರ್ಯಕ್ರಮ ನಿರೂಪಿಸಿ  ನಿರ್ವಹಿಸಿದರು.