ಪ್ರೇಕ್ಷಕರ ಕೊರತೆ:ನಷ್ಟದ ಸಂಕೋಲೆಯಲ್ಲಿ ಚಿತ್ರಮಂದಿರಗಳು

ಕಲಬುರಗಿ,ಜ.27-ಕೊರೊನಾ ಲಾಕ್ ಡೌನ್ ನಿಂದಾಗಿ ಬಾಗಿಲು ಮುಚ್ಚಿದ್ದ ನಗರದ ಕೆಲ ಚಿತ್ರ ಮಂದಿರಗಳು ಮತ್ತೆ ಬಾಗಿಲು ತೆರೆದು ಒಂದು ವಾರ ಕಳೆದರೂ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಆಗಮಿಸದೇ ಇರುವುದರಿಂದ ನಷ್ಟ ಅನುಭವಿಸುವಂತಾಗಿದೆ.
ಸರ್ಕಾರದ ಮಾರ್ಗಸೂಚಿ ಅನ್ವಯ ಶೇ.50ರಷ್ಟು ಪ್ರೇಕ್ಷಕರಿಗೆ ಸಿನೆಮಾ ನೋಡಲು ಅವಕಾಶ ಕಲ್ಪಿಸಲಾಗಿದ್ದರೂ ಶೇ.20 ರಿಂದ 25 ರಷ್ಟು ಜನ ಪ್ರೇಕ್ಷಕರು ಸಿನೆಮಾ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಇದರಿಂದಾಗಿ ಚಿತ್ರಮಂದಿರಗಳ ಮಾಲೀಕರು ಕೈ ಸುಟ್ಟುಕೊಳ್ಳುವಂತಾಗಿದೆ.
ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಆಸನ ವ್ಯವಸ್ತೆ ಶೇ.50ರಷ್ಟು ಮೀರುವಂತಿಲ್ಲ. ಪ್ರತಿ ಆಸನದ ನಡುವೆ ಸಾಮಾಜಿಕ ಅಂತರ ಇರಬೇಕು, ಮಾರ್ಕ್ ಮಾಡಿದ ಸೀಟ್ ಗಳಲ್ಲಿ ಮಾತ್ರ ಪ್ರೇಕ್ಷಕರು ಕೂರಬೇಕು, ಹ್ಯಾಂಡ್ ವಾಶ್, ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು, ಚಿತ್ರಮಂದಿರಕ್ಕೆ ಬರುವ ಎಲ್ಲರಿಗೂ ಆರೋಗ್ಯ ಸೇತು ಯ್ಯಾಪ್ ಕಡ್ಡಾಯ, ಥರ್ಮಲ್ ಸ್ಕ್ರೀನಿಂಗ್ ಇರಬೇಕು, ಕೋವಿಡ್ ಲಕ್ಷಣ ಇಲ್ಲದವರಿಗೆ ಮಾತ್ರ ಸಿನೆಮಾ ವೀಕ್ಷಣೆಗೆ ಅವಕಾಶ ಎಂದು ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಚಿತ್ರ ಮಂದಿರಗಳು ಈ ಎಲ್ಲಾ ಮಾರ್ಗಸೂಚಿ ಅನ್ವಯವೇ ಚಿತ್ರಪ್ರದರ್ಶನ ನಡೆಸುತ್ತಿದ್ದರೂ ಪ್ರೇಕ್ಷಕರು ಮಾತ್ರ ನಿರೀಕ್ಷಿತ ಸಂಖ್ಯೆಯಲ್ಲಿ ಆಗಮಿಸುತ್ತಿಲ್ಲ. ಹೀಗಾಗಿ ಚಿತ್ರ ಮಂದಿರಗಳು ನಷ್ಟದ ಹೊರೆ ಹೊರುವಂತಾಗಿದೆ.
ನಗರದ ಸಂಗಮ್ ಮತ್ತು ತ್ರೀವೇಣಿ ಹಾಗೂ ಮಿರಾಜ್ ಮಲ್ಟಿಪ್ಲೆಕ್ಸ್ ಈಗಾಗಲೆ ಚಿತ್ರ ಪ್ರದರ್ಶನ ಆರಂಭಿಸಿವೆ. ಶೆಟ್ಟಿ ಮಲ್ಟಿಪ್ಲೆಕ್ಸ್ ಮತ್ತು ಮುಕ್ತಾದಲ್ಲಿನ್ನೂ ಚಿತ್ರ ಪ್ರದರ್ಶನ ಆರಂಭವಾಗಿಲ್ಲ. ಕೋವಿಡ್ ಮಹಾಮಾರಿಯ ಉಪಟಳ ಕಡಿಮೆಯಾಗಿದ್ದರೂ ಜನರಲ್ಲಿನ್ನೂ ಕೊರೊನಾ ಭಯ, ಆತಂಕ ಇನ್ನೂ ಹೋಗಿಲ್ಲ. ಇದು ಸಹ ಪ್ರೇಕ್ಷಕರು ಸಂಖ್ಯೆ ಕಡಿಮೆಯಾಗಿರುವುದಕ್ಕೆ ಕಾರಣವಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಶೇ.50ರಷ್ಟು ಪ್ರಕ್ಷೇಕರಿಗೆ ಸಿನೆಮಾ ನೋಡಲು ಅವಕಾಶ ಕಲ್ಪಿಸಿರುವುದರಿಂದ ಕನ್ನಡ, ಹಿಂದಿ ಸೇರಿದಂತೆ ಇತರೆ ಭಾಷೆಗಳ ಸ್ಟಾರ್ ನಟರು ಮತ್ತು ದೊಡ್ಡ ಬಜೆಟ್ ನ ಸಿನೆಮಾಗಳನ್ನು ನಿರ್ಮಾಪಕರು ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಕಡಿಮೆ ಬಜೆಟ್ ನ ಮತ್ತು ಡಬ್ಬಿಂಗ್ ಸಿನೆಮಾಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಇದರಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಆಗಮಿಸುತ್ತಿಲ್ಲ. ಮುಂಬರುವ ದಿನಗಳಲ್ಲಿ ಸ್ಟಾರ್ ನಟರ ಮತ್ತು ದೊಡ್ಡ ಬಜೆಟ್ ಸಿನೆಮಾಗಳು ಬಿಡುಗಡೆಯಾದರೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರೇಕ್ಷಕರು ಆಗಮಿಸಬಹುದು ಎನ್ನುತ್ತಾರೆ ಸಂಗಮ್ ಮತ್ತು ತ್ರಿವೇಣಿ ಚಿತ್ರಮಂದಿರದ ಮ್ಯಾನೇಜರ್ ಶ್ರೀಕಾಂತ ಪಾಟೀಲ ಅವರು.
ಕೋವಿಡ್ ಲಾಕ್ ಡೌನ್ ನಿಂದಾಗಿ ಬಾಗಿಲು ಮುಚ್ಚಿದ್ದ ಸಿನೆಮಾ ಮಂದಿರಗಳು, ಮಲ್ಟಿಪ್ಲೆಕ್ಸ್ ಗಳು ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿವೆ. ಈಗ ಬಾಗಿಲು ತೆಗೆದರೂ ಪ್ರೇಕ್ಷಕರ ಕೊರತೆಯಿಂದಾಗಿ ನಷ್ಟ ಅನುಭವಿಸುವಂತಾಗಿದೆ.ಕೊರೊನಾ ಮಹಾಮಾರಿ ಎಲ್ಲ ಉದ್ಯಮಗಳಿಗೂ ಬರೆ ಹಾಕಿದಂತೆ ಚಿತ್ರೋದ್ಯಮಕ್ಕೂ ಬರೆ ಹಾಕಿ ತನ್ನ ಅಟ್ಟಹಾಸ ಮೆರೆದಿದೆ.