
ನಾಗರಾಜ ಹೂವಿನಹಳ್ಳಿ
ಕಲಬುರಗಿ,ಮೇ.19-ಹೊಸ ಚಲನಚಿತ್ರಗಳು ಬಿಡುಗಡೆಯಾಗದೇ ಇರುವುದರಿಂದ ನಗರದ ಬಹುತೇಕ ಚಲನಚಿತ್ರ ಮಂದಿರಗಳು ಪ್ರೇಕ್ಷಕರೇ ಇಲ್ಲದೆ ಭಣಗುಡುತ್ತಿವೆ. ಇದರಿಂದಾಗಿ ಚಲನಚಿತ್ರ ಮಂದಿರಗಳು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.
ನಗರದಲ್ಲಿರುವ ಮಲ್ಟಿಪ್ಲೆಕ್ಸ್ ಮತ್ತು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಇತ್ತೀಚೆಗೆ ಹೊಸ ಚಲನಚಿತ್ರಗಳು ಬಿಡುಗಡೆಯಾಗಿಲ್ಲ. ಹೀಗಾಗಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹೋಗುತ್ತಿಲ್ಲ. ಇದರಿಂದಾಗಿ ಚಿತ್ರಮಂದಿರಗಳು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದ್ದು, ಇದರ ನೇರ ಪರಿಣಾಮ ಚಿತ್ರ ಮಂದಿರದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಮೇಲೆ ಬೀಳುತ್ತಿದೆ. ಈ ಸಿಬ್ಬಂದಿಗಳಿಗೆ ವೇತನ ನೀಡಲು ಆಗದೇ ಇರುವಂತಹ ಸ್ಥಿತಿಯನ್ನು ಈಗ ಚಿತ್ರ ಮಂದಿರಗಳು ಎದುರಿಸುತ್ತಿವೆ. ಇದೇ ಸ್ಥಿತಿ ಮುಂದುವರಿದರೆ ಚಿತ್ರಮಂದಿರಗಳನ್ನೇ ಬಂದ್ ಮಾಡಬೇಕಾದ ಸ್ಥಿತಿ ಬರಬಹುದು ಎಂಬ ಆತಂಕವನ್ನು ಚಿತ್ರ ಮಂದಿರಗಳ ಮಾಲೀಕರು ಮತ್ತು ವ್ಯವಸ್ಥಾಪಕರು ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ, ಹಿಂದಿ, ತೆಲಗು, ತಮಿಳು ಸೇರಿದಂತೆ ಯಾವುದೇ ಭಾಷೆಯ ಹೊಸ ಚಲನಚಿತ್ರಗಳು ಬಿಡುಗಡೆಯಾಗುತ್ತಿಲ್ಲ. ಮಾಸ್ ಹಿರೋಗಳ ಚಿತ್ರಗಳು ಬರುತ್ತಿಲ್ಲ. ಮಾಸ್ ಹಿರೋಗಳ ಚಲನಚಿತ್ರಗಳು ವರ್ಷಕ್ಕೆ ಒಂದೋ, ಎರಡೋ ಬಿಡುಗಡೆಯಾಗುತ್ತಿರುವುದರಿಂದ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುವುದು ಕಡಿಮೆಯಾಗಿದೆ. ಹೊಸ ಚಲನಚಿತ್ರಗಳು ಬಿಡುಗಡೆಯಾದರೆ ಚಿತ್ರ ಮಂದಿರಗಳಿಗೆ ಜನ ಬರುತ್ತಾರೆ. ಆದರೆ ಇತ್ತೀಚೆಗೆ ಹೊಸ ಚಿತ್ರಗಳೇ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಜನ ಚಿತ್ರ ಮಂದಿರಗಳತ್ತ ಹೆಜ್ಜೆ ಇಡುತ್ತಿಲ್ಲ. ಹೀಗಾದರೆ ಚಿತ್ರ ಮಂದಿರಗಳ ಗತಿ ಏನು ? ದಿನಕ್ಕೆ ಒಂದೋ, ಎರಡೋ ಶೋ ನಡೆದರೆ ಹೆಚ್ಚು, ಇದರಿಂದ ಮೆಂಟೆನೆನ್ಸ್ ಮಾಡುವುದು, ಸಿಬ್ಬಂದಿಗಳಿಗೆ ವೇತನ ನೀಡುವುದು ಕಷ್ಟವಾಗುತ್ತದೆ. ಹೀಗೇ ಮುಂದುವರಿದರೆ ಚಿತ್ರ ಮಂದಿರಗಳನ್ನೇ ಬಂದ್ ಮಾಡುವ ಸ್ಥಿತಿ ಬರುತ್ತದೆ ಎಂದು ನಗರದ ಚಿತ್ರ ಮಂದಿರ ಒಂದರ ವ್ಯವಸ್ಥಾಪಕರು ಆತಂಕ ವ್ಯಕ್ತಪಡಿಸಿದರು.
ಇದು ಕೇವಲ ಕಲಬುರಗಿ ನಗರದಲ್ಲಿರುವ ಚಿತ್ರ ಮಂದಿರಗಳ ಸ್ಥಿತಿ ಮಾತ್ರವಲ್ಲ ರಾಜ್ಯದ ಬಹುತೇಕ ಕಡೆ ಇದೇ ರೀತಿಯ ಪರಿಸ್ಥಿತಿ ಇದೆ. ಹೀಗಾದರೆ ಚಿತ್ರ ಮಂದಿರಗಳು ಉಳಿಯುವುದು ಕಷ್ಟ. ಹೊಸ ಹೊಸ ಚಿತ್ರಗಳು ಬರಬೇಕು, ಪ್ರೇಕ್ಷಕರನ್ನು ಚಿತ್ರ ಮಂದಿರಗಳತ್ತ ಸೆಳೆಯುವ ಚಿತ್ರಗಳು ಬರಬೇಕು, ಮಾಸ್ ಹಿರೋಗಳ ಚಿತ್ರಗಳು ಚಿತ್ರಮಂದಿರಗಳಿಗೆ ಬಿಡುಗಡೆಯಾಗಬೇಕು ಅಂದಾಗ ಮಾತ್ರ ಜನ ಚಲನಚಿತ್ರ ಮಂದಿರಗಳಿಗೆ ಬಂದು ಚಿತ್ರ ನೋಡುತ್ತಾರೆ. ಈ ನಿಟ್ಟಿನಲ್ಲಿ ಚಿತ್ರ ನಟರೂ, ಸಿನೆಮಾ ಉದ್ಯಮ ಚಿಂತಿಸಬೇಕಾದ ಅಗತ್ಯವಿದೆ.
ಕಾರಣ ಏನು:
ರಾಜ್ಯ ವಿಧಾನಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಹೊಸ ಚಲನಚಿತ್ರಗಳು ಚಿತ್ರಮಂದಿರಗಳಿಗೆ ಬಿಡುಗಡೆಯಾಗಿರಿಲಿಕ್ಕಿಲ್ಲ. ಎಲ್ಲರೂ ಚುನಾವಣೆಯಲ್ಲಿಯೇ ಇಷ್ಟು ದಿನ ಬಿಜಿ ಇದ್ದುದ್ದರಿಂದ ಹೊಸ ಚಲನಚಿತ್ರಗಳು ಬಿಡುಗಡೆ ಮಾಡಿಲ್ಲ. ಸದ್ಯ ಬಹುಜನಪ್ರಿಯ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ.ಬಾಲಕರು, ಯುವಕರು, ಮಹಿಳೆಯರು ವಯಸ್ಕರೆನ್ನದೇ ಎಲ್ಲರನ್ನು ಸೆಳೆಯುತ್ತಿರುವ ಈ ಚುಟುಕು ಕ್ರಿಕೆಟ್ ಪಂದ್ಯಾವಳಿಯಿಂದ ಸಿನಿಮಾ ಮಂದಿರಗಳಿಗೆ ಜನ ಬಾರದಿರಬಹುದು.
ಈಗ ಚುನಾವಣೆಗಳು ಮುಗಿದಿವೆ. ಐಪಿಎಲ್ ಪಂದ್ಯಾವಳಿ ಸಹ ಮುಗಿಯುತ್ತ ಬಂದಿದೆ.ಮುಂದೆ ಹೊಸ ಚಿತ್ರಗಳು ಬಿಡುಗಡೆಯಾಗಲಿವೆ. ಪ್ರೇಕ್ಷಕರು ಚಿತ್ರ ಮಂದಿರಗಳಿಗೆ ಹೋಗಿ ಚಲನಚಿತ್ರಗಳನ್ನು ವೀಕ್ಷಿಸಲಿದ್ದಾರೆ ಎಂಬ ಆಶಾಭಾವವನ್ನು ಪ್ರೇಕ್ಷಕರೊಬ್ಬರು ವ್ಯಕ್ತಪಡಿಸಿದರು.
ಕೋವಿಡ್ ಲಾಕ್‍ಡೌನ್‍ನಿಂದ ಸಾಕಷ್ಟು ಸಂಕಷ್ಟ ಎದುರಿಸಿದ ಚಲಚಿತ್ರಮಂದಿರಗಳು ಲಾಕ್‍ಡೌನ್ ತೆರವಿನ ನಂತರ ಒಂದಿಷ್ಟು ಸುಧಾರಿಸಿಕೊಂಡಿದ್ದವು. ಆದರೆ ಇತ್ತೀಚೆಗೆ ಒಟಿಟಿ ವೇದಿಕೆ, ಮೊಬೈಲ್‍ಗಳಿಂದಾಗಿ ಚಿತ್ರಮಂದಿರಗಳಿಗೆ ಬಂದು ಚಲನಚಿತ್ರ ನೋಡುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬುದು ಇನ್ನೊಬ್ಬ ಪ್ರೇಕ್ಷಕರು ಆತಂಕ ವ್ಯಕ್ತಪಡಿಸಿದರು.