ಪ್ರೇಕ್ಷಕರನ್ನು ಮನರಂಜಿಸಿದ ಸಂಗೀತ ಸ್ಪರ್ಧೆ


ಹುಬ್ಬಳ್ಳಿ, ನ29: ಸಂಗೀತವು ಶಾಂತಿ ಮತ್ತು ಸುಸಂಸ್ಕೃತಿಯ ಸಂಕೇತವಾಗಿದ್ದು, ನಾವೆಲ್ಲರೂ ಸಂಗೀತದೊಂದಿಗೆ ಜೀವನ ನಡೆಸುವುದನ್ನು ಕಲಿಯಬೇಕು ಎಂದು ಗೋಕುಲ ರಸ್ತೆಯ ಪೆÇಲೀಸ್ ಠಾಣೆಯ ಸಿಪಿಐ ಜೆ.ಎಮ್.ಕಾಲಿಮಿರ್ಚಿ ಹೇಳಿದರು.
ಇಲ್ಲಿನ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಹುಬ್ಬಳ್ಳಿಯ ಸುಮಧುರ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಸುಮಧುರ ಸಿರಿ- 2021 ಕನ್ನಡ, ಹಿಂದಿ ಚಲನಚಿತ್ರ ಗೀತೆಗಳ ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯ ಫಿನಾಲೆ ಹಾಗೂ ತಾಯಂದಿರಿಗೆ ಸಮರ್ಪಿಸುವ ‘ಜನನಿ’ ಕನ್ನಡ, ಹಿಂದಿ ಚಲನಚಿತ್ರ ಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಯಿಗೆ ಸಮಾನವಾದದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಅಂತಹ ತಾಯಿಗೆ ಸಮರ್ಪಿಸುವ ಕಾರ್ಯಕ್ರಮವನ್ನು ಸುಮಧುರ ಫೌಂಡೇಶನ್ ಮಾಡುತ್ತಿರುವದು ಶ್ಲಾಘನೀಯ, ಹೆಣ್ಣು ಒಂದು ಜೀವ ಉಳಿಸಲು ಮತ್ತು ಅಂತ್ಯಕ್ಕೂ ಕಾರಣವಾಗಬಲ್ಲಳು, ಹೆಣ್ಣು ಅಭಿವೃದ್ಧಿಗೊಂಡರೆ ದೇಶ ಸುಧಾರಿಸಿದ ಹಾಗೆ, ಹೆಣ್ಣುಮಕ್ಕಳನ್ನು ಗೌರವಿಸುವ ಕೆಲಸ ಮಾಡಬೇಕು ಎಂದರು.
ಶ್ರೀ ದತ್ತಾ ಫೌಂಡೇಶನ್ ಮುಖ್ಯಸ್ಥ ಪ್ರಕಾಶ ಜೋಶಿ ಮಾತನಾಡಿ, ನಾನೂ ಸಹ ಸಂಗೀತಪ್ರಿಯ, ಮುಂಬರುವ ದಿನಗಳಲ್ಲಿ ತಾವು ಸಂಗೀತವನ್ನು ಅಭ್ಯಾಸ ಮಾಡಿ ಸಂಗೀತ ಕಾರ್ಯಕ್ರಮ ಆಯೋಜಿಸುವುದಾಗಿ ಪ್ರಕಟಿಸಿದರು. , ಶ್ರೀ ವೇದವ್ಯಾಸ ಕೋ-ಆಪ್ ಸೊಸೈಟಿಯ ಅಧ್ಯಕ್ಷ ಶಂಕರ ಪಾಟೀಲ್ ಅವರು ವಿವಿಧ ಶಾಹಿರಿಗಳನ್ನು ಪ್ರಸ್ತುತ ಪಡಿಸಿ ಪ್ರೇಕ್ಷಕರ ಮನರಂಜಿಸಿದರು.
ಕಾರ್ಯಕ್ರಮದಲ್ಲಿ ಪಂಜುರ್ಲಿ ಗ್ರೂಪ್ ಆಪ್ ಹೊಟೆಲ್‍ನ ಪಾಲುದಾರ ರಾಜೇಶ ಶೆಟ್ಟಿ, ಪೂಜಾ ಪೂಜಾರ, ಸುಮಧುರ ಫೌಂಡೇಶನ್‍ನ ಸಂಸ್ಥಾಪಕಿ ಅಧ್ಯಕ್ಷೆ ಪ್ರೇಮಾ ಹೂಗಾರ ಇದ್ದರು. ನಿರ್ದೇಶಕ ಸುನೀಲ ಪತ್ರಿ ನಿರೂಪಿಸಿದರು.
ವಿಜೇತರಿಗೆ ಪ್ರಶಸ್ತಿ ವಿತರಣೆ: ಸಂಜೆ ಸುಮಧುರ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸುಮಧುರ ಸಿರಿ – 2021 ಕನ್ನಡ, ಹಿಂದಿ ಚಲನಚಿತ್ರ ಗೀತೆಗಳ ರಾಜ್ಯಮಟ್ಟದ ಸಂಗೀತ ಸ್ಪರ್ಧೆಯ ಫಿನಾಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 25ಕ್ಕೂ ಹೆಚ್ಚು ಜೋಡಿಗಳು ಗಾಯನ ಪ್ರಸ್ತುತಪಡಿಸಿದರು.
ಈ ಪೈಕಿ ಅಂತಿಮವಾಗಿ ಮೂವರು ಪ್ರಶಸ್ತಿ ವಿಜೇತರಾಗಿದ್ದು, ಧಾರವಾಡದ ಶಂಕರ ಪುರೋಹಿತ ಅವರು ಪ್ರಥಮ ಸ್ಥಾನ ಪಡೆದು ಹತ್ತು ಸಾವಿರ ರೂ. ನಗದು -ಟ್ರೋಫಿ, ಹುಬ್ಬಳ್ಳಿಯ ವೃಂದಾ ಚೌಕೆ ದ್ವಿತೀಯ ಸ್ಥಾನ ಪಡೆದು ಐದು ಸಾವಿರ ರೂ. ನಗದು -ಟ್ರೋಫಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಶಿವನಾಥ ಸಾವಂತ ತೃತೀಯ ಸ್ಥಾನ ಪಡೆದು ಮೂರು ಸಾವಿರ ರೂ ನಗದು – ಟ್ರೋಫಿಯನ್ನು ಪಡೆದುಕೊಂಡರು.