ಪ್ರೇಕ್ಷಕರನ್ನು ಜಾಗೃತಗೊಳಿಸುವ ಜೀವಂತ ಮಾಧ್ಯಮ- ಪ್ರಸನ್ನ

ರಾಯಚೂರು.ಮಾ.೨೭-ವರ್ತಮಾನದ ತಲ್ಲಣಗಳ ಜೊತೆಗೆ ಮುಖಾಮುಖಿಯಾಗುವ ಶಕ್ತಿಶಾಲಿ ಮಾಧ್ಯಮವೆಂದರೆ ರಂಗಭೂಮಿ. ಇದು ಮನೋರಂಜನೆಯ ಜೊತೆಗೆ ಸಾಮಾಜಿಕ ಅರಿವನ್ನು ಉಂಟು ಮಾಡುವ, ಪ್ರೇಕ್ಷಕರನ್ನು ಜಾಗೃತಗೊಳಿಸುವ ಜೀವಂತ ಮಾಧ್ಯಮವೆಂದು ನಾಟಕಕಾರ ಮಂಡಲಗಿರಿ ಪ್ರಸನ್ನ ಹೇಳಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ,ಕನ್ನಡ ವಿಭಾಗ ಹಾಗೂ ಆಂತರಿಕ ಭರವಸೆಯ ಕೋಶಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣಿ ಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ.ಇಂದಿನ ಅರ್ಥರಹಿತ, ಶೂನ್ಯರಹಿತ ಬಹುತೇಕ ಸಿನಿಮಾಗಳ ಮಧ್ಯೆ ನಾಟಕ ಅಥವಾ ರಂಗಭೂಮಿ ಒಂದು ಕಲೆಯಾಗಿ ಚಿಂತನೆಯ ನೆಲೆಯಾಗಿ, ಬುದ್ದಿ ವಿಚಾರಗಳ ಸಮಚಿತ್ತದ ಶಕ್ತಿಯಾಗಿ, ತನ್ನ ನೇರ ಚಿಕಿತ್ಸಕ ನೋಟದಿಂದ ಜನಮಾನಸದಲ್ಲಿ ನೆಲೆಯೂರಿದೆ ಎಂದರು.
ಪ್ರಾಸ್ತವಿಕ ಮಾತುಗಳನ್ನು ಆಡಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ದಸ್ತಗೀರ್ ಸಾಬ್ ದಿನ್ನಿ ರಂಗಭೂಮಿಯು ಸಿನಿಮಾ ಹಾಗೂ ಧಾರವಾಹಿಗಳ ನಡುವೆ ನಲುಗುತ್ತಿದ್ದು ಅದರಲ್ಲೂ ವಿಶೇಷವಾಗಿ ಯುವ ಸಮುದಾಯದಿಂದ ದೂರ ಸರಿಯುತ್ತಿರುವುದು ವಿಷಾದದ ಸಂಗತಿ. ವಿದ್ಯಾರ್ಥಿಗಳು ರಂಗಭೂಮಿಯ ಬಗೆಗೆ ಆಸಕ್ತಿಯನ್ನು ಬೆಳೆಸಿಕೊಂಡು ಉಳಿಸ ಬೇಕಾದ ಅಗತ್ಯವಿದೆ ಎಂದರು.
ಹಿರಿಯ ಅಧ್ಯಾಪಕ ಡಾ. ಪ್ರಾಣೇಶ ಕುಲಕರ್ಣಿ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಇರುತ್ತದೆ ಅದನ್ನು ಗುರುತಿಸಿ ಅರಳಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಚಾರ್ಯರಾದ ಆರ್ ಮಲ್ಲನ ಗೌಡ ರವರು ರಂಗಭೂಮಿಗೆ ಜನರನ್ನು ಆಕರ್ಷಿಸುವ ಶಕ್ತಿಯಿದೆ, ರಂಗಭೂಮಿಯಿಂದ ಜನರಿಗೆ ಅನೇಕ ಪಾಠಗಳು ಲಭಿಸುತ್ತವೆ ಎಂದರು.
ವೇದಿಕೆಯ ಮೇಲೆ ಸಹಾಯಕ ಪ್ರಾಧ್ಯಾಕರುಗಳಾದ ಮಹಾಂತೇಶ ಅಂಗಡಿ, ಮಹಾದೇವಪ್ಪ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.