ಪ್ರೀತಿ ಹೆಸರಿನಲ್ಲಿ ಕೊಲೆಯತ್ನ ಖಂಡಿಸಿ ಪ್ರತಿಭಟನೆ

ಹುಬ್ಬಳ್ಳಿ,ಏ5 : ಬಾಗಲಕೋಟೆ ಜಿಲ್ಲೆಯ ಗುಡೂರ ಗ್ರಾಮದ ನೇತ್ರಾ ವಡ್ಡರ (20) ಮೇಲಿನ ಅಮಾನುಷ ಕೊಲೆಯತ್ನ ಖಂಡಿಸಿ ಹಿಂದೂ ಜಾಗರಣ ವೇದಿಕೆ ಹಾಗೂ ಧಾರವಾಡ ಜಿಲ್ಲಾ ಶ್ರೀ ಸಿದ್ದರಾಮೇಶ್ವರ ಬೋವಿ (ವಡ್ಡರ) ಕ್ಷೇಮಾಭಿವೃದ್ಧಿ ಸಂಸ್ಥೆ ನಗರದಲ್ಲಿಂದು ಪ್ರತಿಭಟನೆ ನಡೆಸಿತು.
ಇಲ್ಲಿನ ತಹಶಿಲ್ದಾರರ ಕಚೇರಿ ಮುಂಭಾಗದಲ್ಲಿ ಘಟನೆಯನ್ನು ತೀವ್ರವಾಗಿ ಖಂಡಿಸಿದ ಪ್ರತಿಭಟನಾಕಾರರು, ಅನ್ಯಕೋಮಿನ ಯುವಕನೊರ್ವ ಬೋವಿ ವಡ್ಡರ ಸಮಾಜದ ಯುವತಿ ನೇತ್ರಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ, ಆದರೆ ಯುವತಿ ಪ್ರೀತಿಯನ್ನು ನಿರಾಕರಿಸಿದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿ ವಿಕೃತಿ ಮೆರೆದಿದ್ದಾನೆ. ಈ ಘಟನೆಯನ್ನು ಬೋವಿ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದರು.
ನೇತ್ರಾ ವಡ್ಡರ ತಂದೆ-ತಾಯಿಯಿಲ್ಲದ ಅನಾಥೆಯಾಗಿದ್ದು, ಜೀವನದಲ್ಲಿ ಏನಾದರೂ ಸಾಧನೆ ಮಾಡುವ ಕನಸು ಕಂಡಿದ್ದಳು. ಆದರೆ ಇದೀಗ ಸಂಪೂರ್ಣ ಕನಸು ನುಚ್ಚುನೂರಾಗಿದ್ದು, ಅನ್ಯಾಯಕ್ಕೆ ಒಳಗಾದ ಯುವತಿಗೆ ಸರ್ಕಾರ ನಿರ್ಭಯ ಸಂಸ್ಥೆಯ ಅಡಿಯಲ್ಲಿ ಸೂಕ್ತ ಪರಿಹಾರ ಒದಗಿಸಬೇಕು. ಇದಲ್ಲದೇ ದುಷ್ಕೃತ್ಯ ಎಸಗಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಶಿವಾನಂದ ಕೊಣ್ಣೂರು, ಹನುಮಂತಪ್ಪ ಮ್ಯಾಗೇರಿ, ದಯಾನಂದ ಸಾಗರ, ಅಶೋಕ ಅಮರಾವತಿ ಮುಂತಾದವರು ಉಪಸ್ಥಿತರಿದ್ದರು.