ಪ್ರೀತಿ, ಸ್ನೇಹ, ಗೌರವಕ್ಕೆ `ಜಯತೀರ್ಥನೇ ಸರಿಸಾಟಿ: ಮಣೂರ

ಕಲಬುರಗಿ,ಮೇ. 29: ಸಮಕಾಲೀನ ಪತ್ರಿಕೋದ್ಯಮದಲ್ಲಿ ಪ್ರೀತಿ, ಸ್ನೇಹ ಮತ್ತು ಗೌರವಕ್ಕೆ ಪತ್ರಕರ್ತ ಜಯತೀರ್ಥ ಕಾಗಲಕರ್ ಅವರಿಗೆ ಅವರೇ ಸರಿಸಾಟಿಯಾಗಿದ್ದರು ಎಂದು ಹಿರಿಯ ಪತ್ರಕರ್ತ ಶ್ರೀಕಾಂತಾಚಾರಿ ಮಣೂರ ಅಭಿಪ್ರಾಯಪಟ್ಟರು.
ಕೊರೊನಾ ಮಹಾಮಾರಿಯಿಂದ ನಿಧನರಾದ ಪತ್ರಕರ್ತ ಜಯತೀರ್ಥ ಕಾಗಲಕರ್ ಅವರಿಗೆ `ನಮ್ ಟೀಮ್’ ವತಿಯಿಂದ ಪತ್ರಕರ್ತ, ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು, ಗೂಗಲ್ ಮೀಟ್ ಮೂಲಕ ಆಯೋಜಿಸಿದ್ದ ಆನ್‍ಲೈನ್ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿರಿಯ ಪತ್ರಕರ್ತರಾಗಿದ್ದ ವಿ.ಎನ್.ಕಾಗಲಕರ್ ಅವರ ಪುತ್ರ ಜಯತೀರ್ಥ ಅವರು ಸೌಮ್ಯಸ್ವಭಾವವನ್ನು ಹೊಂದಿದ್ದರು. ವಿಧಾನಸಭೆಯ ಅಧಿವೇಶನದ ವರದಿಯನ್ನು ಮಾಡಲು ಹೋಗಿದ್ದ ಕಲಬುರಗಿ ಪತ್ರಕರ್ತ ಎಂಬ ಹೆಮ್ಮೆಗೆ ಕಾರಣವಾಗಿದ್ದರು. ಅತ್ಯಂತ ಸರಳ ಗುಣಸ್ವಭಾವ ಹೊಂದಿದ್ದ ಕಾಗಲಕರ್ ಅವರು ತಮ್ಮ ವೃತ್ತಿಗೆ ಎಂದಿಗೂ ಚ್ಯುತಿ ಬಾರದಂತೆ ವೃತ್ತಿಗೌರವ ಕಾಪಾಡಿಕೊಂಡಿದ್ದಾರೆ. ಆನ್‍ಲೈನಿನಲ್ಲೂ ಅಪಾರ ಸಂಖ್ಯೆ ಸಹೃದಯರು ಕಾಗಲಕರ್ ಬಗ್ಗೆ ನುಡಿನಮನ ಸಲ್ಲಿಸಿದ್ದನ್ನು ಕಂಡು ಹೃದಯತುಂಬಿ ಬಂತು ಎಂದು ಮಣೂರ ಭಾವುಕರಾದರು.
ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಮಾತನಾಡಿ, ಜೀವ ಇದ್ದರೆ ಜೀವನ ಎಂಬುದನ್ನು ಪತ್ರಕರ್ತರು ಮನಗಾಣಬೇಕಿದೆ. ವೃತ್ತಿಯನ್ನು ಗೌರವಿಸುವ ಮೂಲಕ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕೆಂದು ತಿಳಿಸಿದ ಅವರು, ಕಾಗಲಕರ್ ಅವರ ತಂದೆಯೂ ಸಹ ಒಬ್ಬ ಪ್ರಾಮಾಣಿಕ ಪತ್ರಕರ್ತರಾಗಿದ್ದರು. ಮಗ ಜಯತೀರ್ಥ ಕೂಡ ಅಷ್ಟೇ ಪಾರದರ್ಶಕವಾಗಿದ್ದರು ಎಂದು ನೆನಪಿಸಿಕೊಂಡರು.
ಹಿರಿಯ ಪತ್ರಕರ್ತ ಡಿ.ಶಿವಲಿಂಗಪ್ಪ ಮಾತನಾಡಿ, ವಯಸ್ಸು ಚಿಕ್ಕದಾದರೂ ವೃತ್ತಿ ಜ್ಞಾನ ಅಪಾರವಾಗಿದ್ದ ಕಾಗಲಕರ್ ಅವರ ಸ್ನೇಹತ್ವದಿಂದಾಗಿ ಪತ್ರಿಕೋದ್ಯಮದಲ್ಲಿ ವಿಭಿನ್ನತೆಯನ್ನು ಕಂಡಿದ್ದೇವೆ. ಒಳ್ಳೆಯತನಕ್ಕೆ ಕಾಗಲಕರ್ ಸಾಕ್ಷಿಪ್ರಜ್ಞೆ ಎಂದು ಹೇಳಿದರು.
ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ಪ್ರಬುದ್ಧತೆಯನ್ನು ಮೈಗೂಡಿಸಿಕೊಂಡಿದ್ದ ಕಾಗಲಕರ್ ಅವರು ಇನ್ನೊಬ್ಬರ ಬಗ್ಗೆ ಎಂದಿಗೂ ವ್ಯತಿರಿಕ್ತವಾಗಿ ಮಾತನಾಡಿದ ಉದಾಹರಣೆಯೇ ಇಲ್ಲ. ತಾನು ಕೆಲಸ ಮಾಡುವ ಸಂಸ್ಥೆಯ ಏಳಿಗೆ ಮತ್ತು ತನ್ನ ವ್ಯಕ್ತಿತ್ವದ ಕಡೆಗೆ ಹೆಚ್ಚು ಆದ್ಯತೆಯನ್ನು ನೀಡಿದ್ದಾರೆ. ರಂಗಾಯಣದ ನಿರ್ದೇಶಕರಾಗಿ ನೇಮಕಗೊಂಡಾಗ ಸಮರ್ಥರನ್ನು ಸರಕಾರ ಗುರುತಿಸಿದೆ ಎಂದು ಹೇಳಿದ್ದನ್ನು ನೆನಪಿಸಿಕೊಂಡರು.
ಹಿರಿಯ ಪತ್ರಕರ್ತ ಶಿವರಾಯ ದೊಡ್ಡಮನಿ ಮಾತನಾಡಿ, ತಂದೆಗೆ ತಕ್ಕ ಮಗ, ತಂದೆಯ ರೀತಿಯಲ್ಲಿಯೇ ಮಗ ಕೂಡ ಪತ್ರಕರ್ತನಾಗಿ ಉತ್ತಮ ಹೆಸರನ್ನು ಮಾಡಿದ್ದಾರೆ. ಇಂತಹ ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಕಾಗಲಕರ್ ಅವರ ಅಗಲಿಕೆ ಇನ್ನೂ ನಂಬಲಿಕ್ಕಾಗುತ್ತಿಲ್ಲ ಎಂದು ಹೇಳಿದರು.
ಹಿರಿಯ ಪತ್ರಕರ್ತ ಶೇಷಮೂರ್ತಿ ಅವಧಾನಿ ಮಾತನಾಡಿ, ವೃತ್ತಿಗೌರವ, ಬರಹದಲ್ಲಿ ನೈಪುಣ್ಯತೆ, ಸ್ನೇಹಕ್ಕೆ ಕೊಡುತ್ತಿದ್ದ ಗೌರವ, ಆತ್ಮೀಯತೆ, ಎಲ್ಲರೊಂದಿಗೆ ಬೆರೆಯುವ ಗುಣದಿಂದ ಕಾಗಲಕರ್ ಅವರು ನೆನಪಾಗುತ್ತಾರೆ. ಕೊರೊನಾದಿಂದ ಉಳಿದುಬರುತ್ತಾರೆ ಎಂಬ ನಂಬಿಕೆಯಿತ್ತು. ಇಷ್ಟು ಬೇಗ ನಮ್ಮನ್ನೆಲ್ಲಾ ಬಿಟ್ಟು ಅಗಲುತ್ತಾರೆ ಎಂದು ಅನಿಸಿರಲಿಲ್ಲ ಎಂದು ಭಾವುಕರಾಗಿ ಹೇಳಿದರು.
ಶಹಾಪುರದ ಲೇಖಕ ಸಿದ್ದರಾಮ ಹೊನ್ಕಲ್ ಮಾತನಾಡಿ, ಸಾಹಿತಿಗಳ ಬಗ್ಗೆ ತುಂಬಾ ಗೌರವದಿಂದ ಮಾತನಾಡುತ್ತಿದ್ದರು. ಸಾಹಿತ್ಯ ಸಂಬಂಧಿ ಸುದ್ದಿಗಳನ್ನು ಪ್ರಕಟಿಸುವಾಗ ಅದಕ್ಕೊಂದು ಘನತೆ ಬರುವಂತೆ ಮುದ್ರಣ ಮಾಡಿಸುತ್ತಿದ್ದರು. ಇದೆಲ್ಲವೂ ಅವರ ದೊಡ್ಡಗುಣ ಎಂದು ಅಭಿಪ್ರಾಯಪಟ್ಟರು.
ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ಏಕವಚನದಲ್ಲಿಯೇ ಮಾತನಾಡುವ ಆತ್ಮೀಯತೆ ಹೊಂದಿದ್ದ ಕಾಗಲಕರ್ ಅವರು ಸಮಕಾಲೀನ ಪತ್ರಕರ್ತರಿಗೆ ಉದಾಹರಣೆಯಂತಿದ್ದರು. ಅಧಿವೇಶನದ ವರದಿಯನ್ನು ಮಾಡಿದವರಲ್ಲಿ ಕಾಗಲಕರ್ ಅವರದು ಎಂಬ ಹೆಮ್ಮೆಯಿತ್ತು ಎಂಬುದನ್ನು ಸ್ಮರಿಸಿಕೊಂಡರು. ಇದಕ್ಕೂ ಮುನ್ನ ಪ್ರಾಸ್ತಾವಿಕ ಮಾತನಾಡಿದ ಆಯೋಜಕ ಮಹಿಪಾಲರೆಡ್ಡಿ ಮುನ್ನೂರ್, ಆರಂಭದಿಂದ ಕೊನೆಯುಸಿರಿನವರೆಗೂ ಒಂದೇ ಪತ್ರಿಕಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ ಕಾಗಲಕರ್ ಅವರ ಅದಮ್ಯ ಪ್ರೀತಿ, ಜೀವನೋತ್ಸಾಹ ಮತ್ತು ಆತ್ಮೀಯ ಗುಣವನ್ನು ಶ್ಲಾಘಿಸಿದರು.
ಹಿರಿಯ ಲೇಖಕಿ ಸಂಧ್ಯಾ ಹೊನಗುಂಟಿಕರ್, ವಿಜ್ಞಾನ ಪರಿಷತ್ತಿನ ಗಿರೀಶ ಕಡ್ಲೇವಾಡ, ಕಿರಣ್ ಪಾಟೀಲ, ಬಿ.ಎಚ್.ನಿರಗುಡಿ, ಶೇಷಗಿರಿ ಹುಣಸಗಿ, ಸಂಗಮನಾಥ ರೇವತಗಾಂವ, ಸಿದ್ದು ಸಾತಿಹಾಳ, ಕೃಪಾಸಾಗರ ಗೊಬ್ಬುರ, ಗುರುಬಸಪ್ಪ ಸಜ್ಜನಶೆಟ್ಟಿ, ಶಿವಕುಮಾರ ನಿಡಗುಂದಾ ಅವರು ನುಡಿ ನಮನ ಸಲ್ಲಿಸಿದರು. ಪರಮೇಶ್ವರ ಶೆಟಕಾರ, ಡಾ.ಅಶೋಕ ದೊಡ್ಡಮನಿ, ನೀಲಕಂಠ ಮುತ್ತಗಿ, ವಿಜಯಭಾಸ್ಕರರೆಡ್ಡಿ, ಸಂಜಯ ಚಿಕ್ಕಮಠ, ಡಾ.ಮಲ್ಲಿನಾಥ ತಳವಾರ, ಮಹಾದೇವರೆಡ್ಡಿ, ಸುವರ್ಣ ಪಾಟೀಲ, ಕೆ.ಸುನಂದಾ ವಿಜಯಪುರ, ಅಮೋಘ ಸಿರನೂರ, ಅಶುತೋಷ್ ರೇವೂರ, ಜ್ಯೋತಿ ಮುತ್ತಗಿ, ಪ್ರಶಾಂತ ಪಾಟೀಲ ಸೇರಿದಂತೆ ಇತರರು ಭಾಗವಹಿಸಿದ್ದರು.