ಪ್ರೀತಿ, ಪ್ರಯಾಣ, ಜೈಲು; ಬಿಡುಗಡೆ

ಹೈದರಾಬಾದ್/ಬೆಂಗಳೂರು,ಜೂ. ೨- ವಿದೇಶದಲ್ಲಿರುವ ಪ್ರೀತಿಸಿದ ಹುಡುಗಿಯನ್ನು ಭೇಟಿ ಮಾಡಲು ಹರಸಾಹಸಪಟ್ಟು ಪಾಕಿಸ್ತಾನನಲ್ಲಿ ಬಂಧಿಯಾದ ಬೆಂಗಳೂರಿನಲ್ಲಿದ್ದ ಆಂಧ್ರ ಮೂಲದ ಪ್ರೇಮಿಯೊಬ್ಬನ ಕಥೆ ಇದು.

ಸ್ವಿಟ್ಜರ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರೇಯಸಿಯನ್ನು ಭೇಟಿ ಮಾಡಲು ನಿರ್ಧರಿಸಿದ ಯುವಕ ಪ್ರಶಾಂತ್‌ಗೆ ವಿಮಾನದಲ್ಲಿ ತೆರಳಲು ಹಣವಿಲ್ಲದೆ ಪರದಾಡಿದ. ಕೊನೆಗೆ ಗೂಗಲ್ ಮ್ಯಾಪ್ ಸಹಾಯದಿಂದ ರೈಲು ಹಿಡಿದು ಹೊರಟ ಯುವಕ ಪಾಕಿಸ್ತಾನದಲ್ಲಿ ಸಿಕ್ಕಿಹಾಕಿಕೊಂಡು ನಾಲ್ಕು ವರ್ಷ ಜೈಲಿನಲ್ಲಿದ್ದ ಘಟನೆ ಇದೀಗ ಎಲ್ಲವೂ ಸುಖಾಂತ್ಯ ಕಂಡಿದೆ.

ಘಟನೆ ವಿವರ:

ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದ ಪ್ರಶಾಂತ್ ಎಂಬಾತ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಪ್ರಿಯಕರ ತಾನು ಪ್ರೀತಿಸಿದ ಹುಡುಗಿ ಸ್ವಿಟ್ಜರ್ಲೆಂಡ್ ಕೆಲಸಕ್ಕೆ ಹೋದಾಗ ಅವಳನ್ನು ಹುಡುಕಿಕೊಂಡು ಹೋಗಲು ನಡೆಸಿದ ಸಾಹಸ ಯಾವ ಸಿನಿಮಾಗೂ ಕಡಿಮೆ ಇಲ್ಲದಂತಿದೆ.

ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳ ಜೊತೆಗೆ ಪ್ರೀತಿಯಲ್ಲಿ ಬಿದ್ದ ಯುವಕ ಪ್ರಶಾಂತ್ ಎಲ್ಲವೂ ಸರಿಯಾಗಿ ನಡೆಯುತ್ತಿರುವಾಗ ಸಮಯ ಕೂಡ ಅವರಿಬ್ಬರ ಮಧ್ಯೆ ಅಂತರ ಹೆಚ್ಚಿಸಿತು. ಯುವತಿ ಕೆಲಸಕ್ಕಾಗಿ ಸ್ವಿಟ್ಜರ್ಲೆಂಡ್‌ಗೆ ಹೋಗಬೇಕಾಯಿತು. ಗೆಳತಿ ದೂರವಾದುದನ್ನು ಪ್ರಶಾಂತ್‌ಗೆ ಸಹಿಸಲಾಗಲಿಲ್ಲ. ಗೆಳತಿಯ ಅನುಪಸ್ಥಿತಿಯನ್ನು ಅವನ ಕಣ್ಣ ಮುಂದೆ ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ ಕನವರಿಸಿದ.

ಪ್ರೇಯಸಿ ಹೋದ ನಂತರ ತೀವ್ರ ಬೇಸರಕ್ಕೊಳಗಾದ, ಬೆಂಗಳೂರಿನಲ್ಲಿ ಉಳಿಯಲು ಸಾಧ್ಯವಾಗದೆ, ಹೈದರಾಬಾದ್‌ನ ಮತ್ತೊಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಮಗನ ಪರಿಸ್ಥಿತಿ ನೋಡಲಾಗದೆ ಪೋಷಕರು ಕೂಡ ಹೈದರಾಬಾದ್‌ಗೆ ಬಂದು ನೆಲೆಸಿದರು.

ಸ್ಥಳಗಳು ಬದಲಾದರೂ, ಸಂದರ್ಭ, ಅವನ ಆಲೋಚನೆಗಳು ಯಾವಾಗಲೂ ಪ್ರಿಯತಮೆಯ ಕನವರಿಕೆಯಲ್ಲಿಯೇ ಇದ್ದವು. ಮಗನ ಸ್ಥಿತಿಯನ್ನು ನೋಡುತ್ತಾ ದುಃಖಿತರಾದ ಪೋಷಕರು ಪ್ರಶಾಂತ್‌ಗೆ ಹಲವು ಬಾರಿ ತಿಳಿಹೇಳಿದ್ದರು.

ದಿನಗಳು ಉರುಳಿದಂತೆ ಅವನಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಅವನು ಹೇಗಾದರೂ ತನ್ನ ಗೆಳತಿಗಾಗಿ ಸ್ವಿಟ್ಜರ್ಲೆಂಡ್‌ಗೆ ಹೋಗಲು ನಿರ್ಧರಿಸಿದ್ದ. ಆದರೆ, ಅವನಿಗೆ ಅಷ್ಟು ದೂರ ಹೋಗಲು ಆರ್ಥಿಕವಾಗಿ ಶಕ್ತನಾಗಿರಲಿಲ್ಲ. ಹೇಗಾದರು ಪ್ರೇಯಸಿಯನ್ನು ಸೇರಲೇ ಬೇಕು ಎಂದು ಖಂಡಗಳನ್ನು ದಾಟಲು ಗೂಗಲ್ ಮ್ಯಾಪ್ ಪರೀಕ್ಷಿಸಿದ್ದ. ಪಾಕಿಸ್ತಾನದ ಮೂಲಕ ಹೋದರೆ, ಕೇವಲ ೬೧ ದಿನಗಳಲ್ಲಿ ಸ್ವಿಟ್ಜರ್ಲೆಂಡ್ ತಲುಪಬಹುದು ಎಂದು ತಿಳಿದುಕೊಂಡ.

೨೦೧೭ ರ ಏಪ್ರಿಲ್ ೧೧ ರಂದು ಮನೆಯರೆಲ್ಲರೂ ನಿದ್ರೆಯಲ್ಲಿದ್ದಾಗ ಪ್ರಶಾಂತ್ ಮೊಬೈಲ್ ಫೋನ್ ಮನೆಯಲ್ಲೇ ಬಿಟ್ಟು ಪ್ರಯಾಣ ಪ್ರಾರಂಭಿಸಿದ್ದ. ಹೈದರಾಬಾದ್‌ನಿಂದ ದೆಹಲಿಗೆ ಮತ್ತು ಅಲ್ಲಿಂದ ರಾಜಸ್ಥಾನದ ಬಿಕಾನೆರ್‌ಗೆ ರೈಲಿನಲ್ಲಿ ಪ್ರಯಾಣಿಸಿ, ಅಲ್ಲಿ ಪಾಕಿಸ್ತಾನದ ’ಗಡಿ ಫೆನ್ಸಿಂಗ್’ ತಲುಪಿದ. ಅಲ್ಲಿನ ಗಡಿಯ ಫೆನ್ಸಿಂಗ್ ಹಾರಿ ಪಾಕಿಸ್ತಾನದ ಭೂಪ್ರದೇಶವನ್ನು ಪ್ರವೇಶಿಸಿದ ಸುಮಾರು ೫೦ ಕಿ.ಮೀ. ಗೂಗಲ್ ನಕ್ಷೆಯ ಕಾಗದವನ್ನು ಹಿಡಿದು ಮುಂದೆ ಸಾಗುತ್ತಿದ್ದ ವೇಳೆ ಪ್ರಶಾಂತ್‌ನನ್ನು ಗಮನಿಸಿದ ಪಾಕಿಸ್ತಾನದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದುಕೊಂಡರು.

ಯಾವುದೇ ವೀಸಾ ಅಥವಾ ಪಾಸ್‌ಪೋರ್ಟ್ ಇಲ್ಲದ ಕಾರಣ ಅಕ್ರಮ ಪ್ರವೇಶ ಪ್ರಕರಣ ದಾಖಲಿಸಿ, ಪ್ರಶಾಂತ್‌ನನ್ನು ಜೈಲಿಗಟ್ಟಿದರು. ಜೈಲಿನ ಗೋಡೆಗಳೊಳಗೆ ಪ್ರಶಾಂತ್ ನಾಲ್ಕು ವರ್ಷ ಖೈದಿಯಾಗಿ ಕಳೆದ. ಇದೀಗ ಪ್ರಕರಣ ಸುಖಾಂತ್ಯಗೊಂಡಿದೆ.