ಪ್ರೀತಿ ಒಪ್ಪದ ಯುವತಿ ಕೊಂದ ಆರೋಪಿ ಸೆರೆ

ತುಮಕೂರು, ಏ. ೮- ಪ್ರೀತಿ ಒಪ್ಪದ ಯುವತಿಯನ್ನು ಕೊಲೆಗೈದಿದ್ದ ಆರೋಪಿಯನ್ನು ಕಳ್ಳಂಬೆಳ್ಳ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಸಿರಾ ತಾಲ್ಲೂಕಿನ ದೊಡ್ಡಗೂಳ ಗ್ರಾಮದ ನಿವಾಸಿ ಈರಣ್ಣ ಅಲಿಯಾಸ್ ಸಣ್ಣೀರ (೨೫) ಎಂಬಾತನೇ ಬಂಧಿತ ಆರೋಪಿ.
ಈತ ಮೊನ್ನೆ (ಏ. ೫) ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಯುವತಿ ಕಾವ್ಯಳನ್ನು ನೋಡಿ ಬೈಕ್ ನಿಲ್ಲಿಸಿ ಆಕೆಯನ್ನು ದೊಡ್ಡುಗೂಳಕೆರೆಯ ಪಕ್ಕದಲ್ಲಿರುವ ಸೀಮೆ ಜಾಲಿಗಿಡಗಳು ಬೆಳೆದಿರುವ ಕಡೆಗೆ ಎಳೆದುಕೊಂಡು ಹೋಗಿ ತನ್ನ ಕೈನಲ್ಲಿದ್ದ ಕುಡುಗೋಲಿನಿಂದ ಮುಖ, ಕತ್ತು ಮತ್ತು ಕೈಗಳನ್ನು ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದನು
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕಳ್ಳಂಬೆಳ್ಳ ಪೊಲೀಸರು ಅಡಿಷನಲ್ ಎಸ್ಪಿ ಉದೇಶ್, ಡಿವೈಎಸ್ಪಿ ಕುಮಾರಪ್ಪ ಮಾರ್ಗದರ್ಶನದಲ್ಲಿ ಸಿರಾ ಗ್ರಾಮಾಂತರ ಸಿಪಿಐ ರವಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಹಲ್ಕೂರು ಕೆರೆಯ ಅಂಗಳದಲ್ಲಿ ಸೀಮೆ ಜಾಲಿ ಪೊದೆಯಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ, ಕೃತ್ಯಕ್ಕೆ ಉಪಯೋಗಿಸಿದ್ದ ಕುಡುಗೋಲು, ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಬಂಧಿಸುವಲ್ಲಿ ಕಳ್ಳಂಬೆಳ್ಳ ಪಿಎಸ್‌ಐಗಳಾದ ಸಿ.ಆರ್. ಭಾಸ್ಕರ್, ಪಾಲಾಕ್ಷಪ್ರಭು ಮತ್ತು ಸಿಬ್ಬಂದಿಗಳಾದ ರೇಣುಕ, ಕಿರಣ್‌ಕುಮಾರ್, ಹನುಮಂತರಾಯಪ್ಪ, ಮಹೇಶ್, ಪ್ರಸಾದ್, ಬಸವರಾಜು, ಹರೀಶ್‌ಕುಮಾರ್, ಸುದರ್ಶನ, ರಂಗನಾಥ್ ಮತ್ತು ಚಾಲಕರಾದ ಮಂಜುನಾಥ್, ಸಂತೋಷ್‌ಕುಮಾರ್‌ರವರ ಕಾರ್ಯವೈಖರಿ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ಪ್ರಶಂಸೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.