ಪ್ರೀತಿ ಆರೈಕೆ ಟ್ರಸ್ಟ್‌ ನಿಂದ ಆರೋಗ್ಯ ಶಿಬಿರ

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.೧೩: ಪ್ರೀತಿ ಆರೈಕೆ ಟ್ರಸ್ಟ್, ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ 15ನೇ ಆರೋಗ್ಯ ಉಚಿತ ತಪಾಸಣೆ ಶಿಬಿರವು ಶಾಮನೂರಿನ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ  ಯಶಸ್ವಿಯಾಗಿ ನೆರವೇರಿತು. ಮುಂಜಾನೆ ಏಳು ಗಂಟೆಯಿಂದಲೇ ಆರೋಗ್ಯ ತಪಾಸಣೆ ಪ್ರಾರಂಭವಾಗಿ ಮಧ್ಯಾಹ್ನ ಹನ್ನೆರೆಡು ಗಂಟೆಯ ವರೆಗೂ ಮುಂದುವರಿಯಿತು. 320ಕ್ಕೂ ಹೆಚ್ಚಿನ ಸಾರ್ವಜನಿಕರು ವೈದ್ಯರಿಂದ  ತಪಾಸಣೆ ಪಡೆದು ಆರೋಗ್ಯದ ಮಾಹಿತಿ, ಸಲಹೆ ಸೂಚನೆ ಪಡೆದರು. ಕಳೆದ ಏಪ್ರಿಲ್‌ನಿಂದ ಪ್ರತಿ ವಾರವೂ ದಾವಣಗೆರೆ ನಗರದ ಪ್ರಮುಖ ಸ್ಥಳ, ಉದ್ಯಾನಗಳು ಸೇರಿದಂತೆ ಕೆಲವು ಹಳ್ಳಿಗಳಲ್ಲಿ ಉಚಿತ ತಪಾಸಣೆ ಶಿಬಿರವನ್ನು ಟ್ರಸ್ಟ್ ನಿರಂತರವಾಗಿ ಆಯೋಜಿಸುತ್ತಿದೆ.ಶಿಬಿರದಲ್ಲಿ ಹಾಜರಿದ್ದ ದಾವಣಗೆರೆ ನಗರ ಉತ್ತರ ಯುವ ಬಿಜೆಪಿ ಅಧ್ಯಕ್ಷರಾದ ಹರೀಶ್ ಮಾತನಾಡಿ, ಪ್ರೀತಿ ಆರೈಕೆ ಟ್ರಸ್ಟ್ ನ ಶಿಬಿರಗಳು ಯಾವುದೇ ಪ್ರಚಾರವಿಲ್ಲದೆಯೇ ಸೇವೆಯಂತೆ ನೆರವೇರುತ್ತಿವೆ. ಇದು ನಿಜಕ್ಕೂ ಕೂಡ ಮೆಚ್ಚುವಂತಹ ಕಾರ್ಯ. ಕೆಲಸಕ್ಕಿಂತ ಅಬ್ಬರವೇ ಹೆಚ್ಚಾಗಿರುವಂಥ ಇಂಥ ದಿನಮಾನಗಳಲ್ಲಿ ಡಾ. ರವಿಕುಮಾರ್ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ 15 ಆರೋಗ್ಯ ತಪಾಸಣೆ ಶಿಬಿರಗಳನ್ನು ಕೇವಲ ಎರಡು ತಿಂಗಳಲ್ಲಿ ಆಯೋಜಿಸಿ, ಯಶಸ್ವಿಯಾಗಿ ನೆರವೇರಿಸಿದ್ದಾರೆ. ಮುಂದೆಯೂ ಕೂಡ ನಿರಂತರವಾಗಿ ನಡೆಯಲಿ ಎಂದು ಹಾರೈಸಿ, ಇದಕ್ಕಾಗಿ ಟ್ರಸ್ಟ್‌ ಸರ್ವ ಸದಸ್ಯರಿಗೂ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದರು. ಮಾಜಿ ಶಾಸಕರಾದ ಗುರುಸಿದ್ಧನಗೌಡ  ಮಾತನಾಡಿ, ಪ್ರೀತಿ ಆರೈಕೆ ಟ್ರಸ್ಟ್ ಶಿಬಿರಗಳನ್ನು ಎಲ್ಲಿಯೇ ಆಯೋಜನೆ ಮಾಡಿದರೂ ಜನರಿಂದ ಅಪಾರ ಜನ ಮನ್ನಣೆ, ಪ್ರೇರಣೆ ಸಿಗುತ್ತಿದೆ. ಬರುವ ದಿನಗಳಲ್ಲಿ ತಮ್ಮ ಊರಿನಲ್ಲಿಯೂ ಶಿಬಿರ ಆಯೋಜನೆ ಮಾಡಿ ಎಂದು ಮನವಿಗಳು ಬಂದಿವೆ. ಇದೆಲ್ಲವೂ ಕೂಡ ನಮ್ಮ ಜಿಲ್ಲೆಯ ನಾಗರೀಕರ ಅಭಿಮಾನ ಫಲ. ಟ್ರಸ್ಟ್ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿವೆ ಎಂದರು.