ಪ್ರೀತಿ ಆರೈಕೆ ಟ್ರಸ್ಟ್ ಗೆ 25ನೇ ಶಿಬಿರ ಸಂಭ್ರಮ : 6 ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತ ತಪಾಸಣೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಸೆ.೨೫; ಕನ್ನಡನಾಡು ಶಿವಶರಣರ ಕಾಲದಿಂದಲೂ ಶಿಕ್ಷಣ ಮತ್ತು ಅನ್ನ ದಾಸೋಹಕ್ಕೆ ಹೆಸರು ವಾಸಿಯಾಗಿದೆ. ಇದೇ ಸ್ಫೂರ್ತಿಯನ್ನು ಪಡೆದು ಪ್ರೀತಿ ಆರೈಕೆ ಟ್ರಸ್ಟ್ ವತಿಯಿಂದ ಆರೋಗ್ಯ ದಾಸೋಹವನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದು ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ರವಿಕುಮಾರ್ ಟಿ.ಜಿ ಹೇಳಿದರು.ಹರಿಹರ ನಗರ ಶ್ರೀ ಹರಿಹರೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ಸಿಬ್ಬಂದಿ ಮತ್ತು ಸದಸ್ಯರಿಗೆ ಪ್ರೀತಿ ಆರೈಕೆ ಟ್ರಸ್ಟ್ ಏರ್ಪಡಿಸಿದ್ದ ಆರೋಗ್ಯ ಉಚಿತ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. 

ಅತಿ ಕಡಿಮೆ ಅವಧಿಯಲ್ಲೇ 25ನೇ ಆರೋಗ್ಯ ಶಿಬಿರದ ಸಾರ್ಥಕತೆ ಬಂದು ತಲುಪಿದ್ದೇವೆ. ಕಳೆದ ಏಪ್ರಿಲ್ ಅಂತ್ಯದಲ್ಲಿ ದಿವಂಗತ ಶ್ರೀಮತಿ ಪ್ರೀತಿ ರವಿಕುಮಾರ್ ಅವರ ಸ್ಮರಣೆಗಾಗಿ ಟ್ರಸ್ಟ್ ಪ್ರಾರಂಭ ಮಾಡಲಾಯಿತು. ಅಂದಿನಿಂದಲೂ ಹಲವು ಸಮಾಜ ಹಿತವಾದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಾಗಿದೆ. ಮುಖ್ಯವಾಗಿ ಆರೋಗ್ಯ ಉಚಿತ ತಪಾಸಣೆ ಶಿಬಿರಗಳಿಗೆ ದಾವಣಗೆರೆ ಜಿಲ್ಲೆಯಾದ್ಯಂತ ಹೆಚ್ಚಿನ ಮನ್ನಣೆ, ಮೆಚ್ಚುಗೆ ದೊರೆತಿದೆ, ಇದಕ್ಕೆ ನಾನು ಅಭಾರಿ ಎಂದು ಹೇಳಿದರು.ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಇದ್ದಾಗಲೇ ದೇಶದ ಪ್ರಗತಿಗೆ ಕೊಡುಗೆ ನೀಡಲು ಸಾಧ್ಯ. ಭಾರತವನ್ನು ವಿಶ್ವದ ಸರ್ವಶ್ರೇಷ್ಠ ದೇಶ ಮಾಡಲು ನಾವೆಲ್ಲರೂ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿ ಇರುವ ಮೂಲಕ ನಮ್ಮ ಯೋಗದಾನ ನೀಡೋಣ ಎಂದು ಕಿವಿಮಾತು ಹೇಳಿದರು.

ಬ್ಯಾಂಕ್ ನಿದೇಶಕರಾದ ಜಿ.ವಿ. ಪ್ರವೀಣ್ ಕುಮಾರ್ ಮಾತನಾಡಿ, ಡಾ. ಟಿ.ಜಿ.ರವಿಕುಮಾರ್ ಅವರ ಆರೋಗ್ಯ ದಾಸೋಹ ನೀಡುತ್ತೇವೆ ಎಂಬ ಮಾತು ಕೇಳಿ ಅತ್ಯಂತ ಹೆಮ್ಮೆ ಎನಿಸಿತು. ವೈದ್ಯಕೀಯ ಕ್ಷೇತ್ರದವರು ಬರೀ ಹಣ ಗಳಿಕೆಯ ಉದ್ದೇಶ ಹೊಂದಿರುತ್ತಾರೆ ಎಂಬ ಮಾತು ಅಸತ್ಯ ಎನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರೀತಿ ಆರೈಕೆ ಟ್ರಸ್ಟ್ನಿಂದ ಹೆಚ್ಚೆಚ್ಚು ಆರೋಗ್ಯ ಉಚಿತ ಶಿಬಿರಗಳು ನೆರವೇರಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.  ಬ್ಯಾಂಕ್ ಅಧ್ಯಕ್ಷರಾದ ಕೆ. ರವಿಚಂದ್ರ, ಉಪಾಧ್ಯಕ್ಷರಾದ ಹಾಲೇಶ್ ಬಾವಿಕಟ್ಟೆ, ನಿರ್ದೇಶಕರಾದ ಬಿ.ಕೆ. ಅನ್ವರ್ ಪಾಷಾ, ಅಣ್ಣಪ್ಪ.ಕೆ, ಪರಶುರಾಮ್ ಅಂಬೇಕರ್, ವಿದ್ಯಾ ಮೆಹರ್ವಾಡೆ, ನಾಗೇಂದ್ರಸಾ ಕಾಟ್ವೆ, ಶ್ರೀ ಜಿ.ವಿ. ಪ್ರವೀಣ್ ಕುಮಾರ್, ವೀರಭದ್ರಯ್ಯ ಎಚ್.ಎಂ, ಈಶ್ವರ್ ಬಿ.ಆರ್. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.