ಪ್ರೀತಿಸಿ ವಿವಾಹವಾಗಿ ಸಾವಿನಲ್ಲೂ ಒಂದಾದ ದಂಪತಿ

ಮೈಸೂರು,ನ.೬- ಪ್ರೀತಿಸಿ ವಿವಾಹವಾದ ಜೋಡಿ ಸಾವಿನಲ್ಲೂ ಒಂದಾದ ದುರಂತ ಘಟನೆ ಕೆ.ಆರ್ ಎಸ್ ಬಳಿಯಲ್ಲಿ ನಡೆದಿದೆ. ಶಾದನಹಳ್ಳಿ ಗ್ರಾಮದ ಶಿವಕುಮಾರ್ (೨೯) ಹಾಗೂ ಕವಿತಾ (೨೫) ಸಾವಿನಲ್ಲೂ ಒಂದಾದ ದಂಪತಿಯಾಗಿದ್ದಾರೆ. ಇವರಿಬ್ಬರೂ ಪ್ರೀತಿಸಿ ೫ ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಶ್ರೀರಂಗಪಟ್ಟಣ ಮೊಗರಳ್ಳಿ ಗ್ರಾಮದಲ್ಲಿ ನೆಲೆಸಿದ್ದರು.ನಿನ್ನೆ ಕೆ.ಆರ್.ಎಸ್. ಬಳಿಯ ವರುಣಾ ಕಾಲುವೆ ಕಟ್ಟೆ ಮೇಲೆ ಕುಳಿತು ಬಟ್ಟೆ ಒಗೆಯುತ್ತಿದ್ದ ಕವಿತಾ ಆಕಸ್ಮಿಕವಾಗಿ ನೀರಿಗೆ ಜಾರಿ ಬಿದ್ದಿದ್ದರು. ಪತ್ನಿಯನ್ನು ರಕ್ಷಿಸಲು ಪತಿ ಶಿವಕುಮಾರ್ ಸಹ ನೀರಿಗೆ ಹಾರಿದ್ದಾರೆ.
ಆದರೆ ಇಬ್ಬರೂ ಸಹ ನೀರಿನಿಂದ ಮೇಲೆ ಬಂದಿಲ್ಲ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾಮನಕೆರೆಹುಂಡಿ ಬಳಿಯ ವರುಣಾ ಚಾನೆಲ್?ನಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ನಾಲೆಯ ಬಳಿ ಬಟ್ಟೆ ಒಗೆಯುತ್ತಿರುವಾಗ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದ ಪತ್ನಿಯನ್ನು ರಕ್ಷಿಸಲು ನಾಲೆಗೆ ಹಾರಿದ ಪತಿಯೂ ಸಹ ನೀರು ಪಾಲಾಗಿದ್ದಾನೆ. ಪ್ರೀತಿಸಿ ವಿವಾಹವಾಗಿ ಒಟ್ಟಿಗೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ ಸಾವಿನಲ್ಲೂ ಸಹ ಒಂದಾಗಿದೆ. ದಂಪತಿಯ ಸಾವಿನ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.