ಪ್ರೀತಿಸಿ, ಕೈಕೊಟ್ಟ ಯುವಕನ ಮನೆಮುಂದೆ ಯುವತಿ ಪ್ರತಿಭಟನೆ

ಉಡುಪಿ, ನ.೯- ಮದುವೆಯಾಗುವುದಾಗಿ ನಂಬಿಸಿ, ೧೩ ವರ್ಷ ಯುವತಿಯನ್ನು ಪ್ರೀತಿಸಿ, ದೈಹಿಕ ಸಂಪರ್ಕ ಬೆಳೆಸಿದ್ದ ಯುವಕ ಇದೀಗ ನಾಪತ್ತೆಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಪರ್ಕಳದ ಗಣೇಶ್ ನಾಪತ್ತೆಯಾಗಿರುವ ಯುವಕ. ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್, ಅದೇ ಕಂಪೆನಿಯ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇಬ್ಬರ ನಡುವೆ ೧೩ ವರ್ಷದ ಹಿಂದೆ ಪ್ರೇಮಾಂಕುರವಾಗಿತ್ತು ಈ ಅವಧಿಯಲ್ಲಿ ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದಿದೆ. ಮದುವೆಯಾಗುವುದಾಗಿ ಯುವಕ ನಂಬಿಸಿ ೧೩ ವರ್ಷ ದಿನ ದೂಡಿದ್ದಾನೆ. ಎರಡು ಬಾರಿ ಅಬಾರ್ಷನ್ ಕೂಡಾ ಮಾಡಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ನವೆಂಬರ್ ನಾಲ್ಕಕ್ಕೆ ಬೇರೆ ಹುಡುಗಿಯನ್ನು ಮದುವೆಯಾಗಲು ಮಹೂರ್ತ ಕೂಡ ಫಿಕ್ಸ್ ಮಾಡಿದ್ದಾನೆ. ಈ ವಿಚಾರ ಪ್ರೀತಿಸಿದ ಯುವತಿಗೆ ಗೊತ್ತಾಗಿ, ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪೊಲೀಸರ ಮಧ್ಯಪ್ರವೇಶದ ನಂತರ ನವೆಂಬರ್ ಆರಕ್ಕೆ ಪ್ರೀತಿಸಿದ ಯುವತಿಯನ್ನೇ ಮದುವೆಯಾಗುವುದಾಗಿ ಗಣೇಶ್ ಒಪ್ಪಿಕೊಂಡಿದ್ದಾನೆ. ಮದುವೆಯ ಸಂಭ್ರಮದಲ್ಲಿ ಯುವತಿಯ ಮನೆಯವರು ಎಲ್ಲ ಶಾಸ್ತ್ರಗಳನ್ನು ಮುಗಿಸಿದ್ದರು. ಯುವತಿ ಮದರಂಗಿ ಚಿತ್ತಾರ ಮಾಡಿಕೊಂಡು ಮದುವೆ ಮಂಟಪಕ್ಕೆ ಬಂದಿದ್ದಾಳೆ. ಆದರೆ ಯುವಕ ಕೈಕೊಟ್ಟು ಪರಾರಿಯಾಗಿದ್ದಾನೆ. ಆಕಾಶವೇ ಕುಸಿದು ಬಿದ್ದಂತಾದ ಯುವತಿ ಆಕ್ರೋಶಗೊಂಡು ಯುವಕನ ಮನೆ, ಸಂಬಂಧಿಕರ ಮನೆಯನ್ನೆಲ್ಲ ಪ್ರಿಯಕರನನ್ನು ಜಾಲಾಡಿದ್ದಾಳೆ. ಯುವಕ ಒಂದು ದಿನ ಕಳೆದರೂ ಬರದಿದ್ದಾಗ ಆತನ ಮನೆಯ ಮುಂದೆ ಪ್ರತಿಭಟನೆ ಕೂತಿದ್ದಾಳೆ. ಜೀವನದ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾಳೆ.