ಪ್ರೀತಿಸಿದ ಯುವತಿಯಿಂದಲೇ ವೈದ್ಯನ ಬರ್ಬರ ಕೊಲೆ

ಬೆಂಗಳೂರು,ಸೆ.೧೯-ಮದುವೆಯಾಗಬೇಕಿದ್ದ ಯುವತಿಯ ಅಶ್ಲೀಲ ಪೋಟೋಗಳನ್ನು ಸಾಮಾಜಿಕ ಜಾಲತಾಣ ಇನ್ಸ್ ಸ್ಟ್ರಾಗ್ರಾಂನಲ್ಲಿ ಹಾಕಿದ್ದ ವೈದ್ಯನನ್ನು ಆ ಯುವತಿಯೇ ಸ್ನೇಹಿತರ ಜೊತೆ ಸೇರಿ ಬರ್ಬರವಾಗಿ ಕೊಲೆ ಮಾಡಿರುವ ದುರ್ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವೈದ್ಯ ವಿಕಾಸ್ (೨೭) ಕೊಲೆಯಾದವರು.ಕೃತ್ಯ ನಡೆಸಿದ ವೈದ್ಯನನ್ನು ಪ್ರೀತಿಸಿ ವಿವಾಹವಾಗಬೇಕಿದ್ದ ಪ್ರತಿಭಾ, ಆಕೆಯ ಸ್ನೇಹಿತರಾದ ಗೌತಮ್,ಸುಶೀಲ್ ಹಾಗೂ ಸೂರ್ಯನನ್ನು ಬಂಧಿಸಲಾಗಿದೆ.
ಪ್ರತಿಭಾ ಹಾಗೂ ವಿಕಾಸ್ ಪ್ರೀತಿಸುತ್ತಿದ್ದು ಮದುವೆಯಾಗಲು ಮುಂದಾಗಿ ಇಬ್ಬರು ನಡುವೆ ಸಲುಗೆ ಬೆಳೆದಿತ್ತು.
ಈ ವೇಳೆ ಇಬ್ಬರ ನಡುವಿನ ಖಾಸಗಿ ಕ್ಷಣಗಳ ಪೋಟೋಗಳು ವಿಡಿಯೋಗಳನ್ನು ವಿಕಾಸ್ ಚಿತ್ರೀಕರಣ ಮಾಡಿಕೊಂಡಿದ್ದ. ಇವುಗಳನ್ನು ವಿಕಾಸ್ ಲ್ಯಾಪ್ ಟಾಪ್ ನಲ್ಲಿ ಪ್ರತಿಭಾ ನೋಡಿ ಕೋಪಗೊಂಡು ವಿಕಾಸ್ ಬಳಿ ಪ್ರಶ್ನೆ ಮಾಡಿ ಜಗಳ ಮಾಡಿದ್ದರು.
ಆದರೆ ವಿಕಾಸ್ ಇದನ್ನು ನಿರ್ಲಕ್ಷ್ಯ ಮಾಡಿ ಮಾತನಾಡಿದ್ದು,ಇದರಿಂದ ಆಕ್ರೋಶಗೊಂಡ ಪ್ರತಿಭಾ ಕಳೆದ ಸೆ.೧೦ ರಂದು ಸ್ನೇಹಿತರಾದ ಸುಶೀಲ, ಸೂರ್ಯ, ಹಾಗೂ ಗೌತಮ್ ಬಳಿ ಮಾತಾಡಲು ವಿಕಾಸ್ ನನ್ನು ಕರೆದು ಜಗಳ ಮಾಡಿ ತಲೆಗೆ ಬಲವಾಗಿ ಹಲ್ಲೆ ಮಾಡಿದ್ದರು.
ಗಂಭೀರವಾಗಿ ಗಾಯಗೊಂಡ ವಿಕಾಸ್ ನನ್ನು ಬಳಿಕ ಆಸ್ಪತ್ರೆಗೆ ಸೇರಿಸಿ ಆತನ ಪೋಷಕರಿಗೆ ಮಾಹಿತಿ ನೀಡಿದ್ದರು.
ಗಾಯಗೊಂಡ ವಿಕಸ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಬೇಗೂರು ಪೊಲೀಸರು ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.