ಪ್ರೀತಿಸಿದ ತಪ್ಪಿಗೆ ವಿಷ ಕುಡಿಸಿ ಯುವಕನ ಕೊಲೆ

ಶಹಾಪುರ,ಜ.3-ಪ್ರೀತಿಯ ವಿಷಯ ಹುಡುಗಿಯ ಕುಟುಂಬಸ್ಥರಿಗೆ ತಿಳಿದು, ಯುವಕನ ಮೇಲೆ ಹಲ್ಲೆ ಮಾಡಿ ಬಳಿಕ ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಹೊರ ವಲಯದಲ್ಲಿ ನಡೆದಿದೆ.
ಶಹಾಪುರ ನಗರದ ಆಶ್ರಯ ಕಾಲೋನಿಯ ಮೈನಾರಿಟಿ ಹಾಸ್ಟೆಲ್ ಬಳಿ ಈ ಘಟನೆ ನಡೆದಿದ್ದು, ಶಹಾಪುರ ತಾಲೂಕಿನ ಸಾದ್ಯಾಪುರ ಗ್ರಾಮದ ಸಂತೋಷ್( 22 ) ಮೃತ ಯುವಕನೆಂದು ಗುರುತಿಸಲಾಗಿದೆ.
ಮೃತ ಸಂತೋಷ ಅದೇ ಗ್ರಾಮದ, ತಮ್ಮದೇ ಜಾತಿಯ ಯುವತಿಯನ್ನು ಪ್ರಿತಿಸುತ್ತಿದ್ದ. ಈ ಇಬ್ಬರ ಪ್ರೀತಿಯ ವಿಚಾರ ಯುವತಿಯ ಮನೆಯವರಿಗೆ ತಿಳಿದಿತ್ತು. ಹೀಗಾಗಿ ಯುವತಿಯ ಸಂಬಂಧಿ ಭಾಗಪ್ಪ ಎಂಬಾತ ಮತ್ತು ಆತನ ಸ್ನೇಹಿತರು ಸಂತೋಷನ್ನನ್ನು ಮಾತುಕತೆಗೆಂದು, ಶಹಾಪುರಕ್ಕೆ ಕರೆದುಕೊಂಡು ಹೋಗಿ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಬಳಿಕ ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಿದ್ದಾರೆಂದು ಎಂದು ಆರೋಪಿಸಲಾಗಿದೆ.
ಸದ್ಯ ಸಂತೋಷ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಹಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಸ್ಪತ್ರೆ ಮುಂದೆ ಸಂತೋಷನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಚೆನ್ನಯ್ಯ ಹಿರೇಮಠ ನೇತ್ರತ್ವದಲ್ಲಿ ಈ ಪ್ರಕರಣದ ತನಿಖೆ ನಡೆಯುತ್ತಿದೆ.