ಪ್ರೀತಿಸಿದ ಇಬ್ಬರುನ್ನು ವರಿಸಿದ ಭೂಪ

ರಾಯಪುರ,ಜ.೮-ಪ್ರೀತಿ ಮಾಡಿ ಮನೆಯವರನ್ನು ಒಪ್ಪಿಸಿ ಮದುವೆಯಾಗಲು ಕಷ್ಟಪಟ್ಟರೂ ಸಹ ಎಷ್ಟೋ ಜನರಿಗೆ ಆ ಪ್ರೀತಿ ಉಳಿಸಿಕೊಳ್ಳಲು ಆಗುವುದಿಲ್ಲ. ಆದರೆ ಇದಕ್ಕೆ ಅಪವಾದವೆಂಬುವಂತೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುವಂತೆ ಒಂದೇ ಮಂಟಪದಲ್ಲಿ ಪ್ರೀತಿ ಮಾಡಿದ ಇಬ್ಬರು ಯುವತಿಯರನ್ನು ಅವರ ಕುಟುಂಬಸ್ಥರ ಮುಂದೆಯೇ ಮದುವೆಯಾಗಿರುವ ಅಚ್ಚರಿಯ ಘಟನೆ ಛತ್ತಿಸಗಡದಲ್ಲಿ ನಡೆದಿದೆ.
ಜನವರಿ ೫ ರಂದು ನಡೆದ ಈ ಮದುವೆಗೆ ಸುಮಾರು ೬೦೦ಕ್ಕೂ ಹೆಚ್ಚು ಜನರು ಸಾಕ್ಷಿಯಾಗಿದ್ದು, ವಧುಗಳ ಎರಡೂ ಕುಟುಂಬದವರು ಸಹ ಭಾಗಿಯಾಗಿರುವುದು ವಿಶೇಷವಾಗಿದೆ.
ಭತ್ಸಾರ್ ಜಿಲ್ಲೆಯ ರೈತ ಮತ್ತು ಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದ ಚಂದು ಮೌರ್ಯ (೨೧) ಬುಡಕಟ್ಟು ಯುವತಿ ಸುಂದರಿ ಕಶ್ಯಪ್ ಅವರನ್ನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಫೋನ್ ಕರೆಯಲ್ಲಿ ಮಾತನಾಡುತ್ತ ಇವರ ಮಧ್ಯೆ ಪ್ರೀತಿ ಚಿಗುರಿ ಈ ಜೋಡಿ ಮದುವೆಯಾಗಲು ನಿರ್ಧರಿಸಿದರು. ಆದರೆ, ವಿಧಿ ಚಂದು ಸಂಬಂಧಿಕರ ಮದುವೆಯಲ್ಲಿ ಭೇಟಿಯಾಗಿದ್ದ ಹಸಿನಾಳನ್ನು ಪುನ: ಪ್ರೀತಿಸುವಂತೆ ಮಾಡಿತು.
ಚಂದು ಈಗಾಗಲೆ ಒಬ್ಬರನ್ನು ಪ್ರೀತಿಸುತ್ತಿದ್ದಾರೆ. ಇದನ್ನು ತಿಳಿದ ಬಳಿಕ ಅದನ್ನು ಒಪ್ಪಿಕೊಂಡ ಹಸಿನಾ ತನ್ನೊಂದಿಗೆ ಫೋನ್ ಮೂಲಕ ಸಂಪರ್ಕದಲ್ಲಿರುವಂತೆ ಚಂದುವನ್ನು ಒತ್ತಾಯಿಸಿದಳು. ಹಸಿನಾ ಮತ್ತು ಸುಂದರಿ ಇಬ್ಬರು ಒಬ್ಬರಿಗೊಬ್ಬರು ಪರಸ್ಪರ ಅರ್ಥಮಾಡಿಕೊಂಡ ಬಳಿಕ ನನ್ನೊಂದಿಗೆ ಸಂಬಂಧ ಹೊಂದಲು ಒಪ್ಪಿಕೊಂಡರು. ಹೀಗೆ ಮೂವರು ದೂರವಾಣಿ ಕರೆಯಲ್ಲಿಯೇ ಸಂಪರ್ಕ ಹೊಂದಿದ್ದೆವು. ಆದರೆ, ಒಂದು ದಿನ ಹಸಿನಾ ನನ್ನೊಂದಿಗೆ ವಾಸಿಸಲು ನನ್ನ ಮನೆಗೆ ಬಂದಳು. ಇದನ್ನು ತಿಳಿದ ಸುಂದರಿ ಕೂಡ ನನ್ನ ಮನೆಗೆ ಬಂದಳು. ಅಂದಿನಿಂದ ನಾವು ಒಂದೇ ಮನೆಯಲ್ಲಿ ಕುಟುಂಬದಂತೆ ವಾಸಿಸಲು ಆರಂಭಿಸಿದ್ದೇವೆ ಎಂದು ಚಂದು ಮೌರ್ಯ ತಿಳಿಸಿದ್ದಾರೆ.
ಇಬ್ಬರು ಮಹಿಳೆಯರೊಂದಿಗೆ ಸಂಬಂಧ ಹೊಂದಿ ಒಂದೇ ಮನೆಯಲ್ಲಿ ವಾಸಿಸುವುದರ ಬಗ್ಗೆ ಗ್ರಾಮಸ್ಥರು ಪ್ರಶ್ನೆ ಮಾಡಲು ಆರಂಭಿಸಿದರು. ಹಾಗಾಗಿ ಇಬ್ಬರನ್ನು ಮದುವೆಯಾಗಲು ನಿರ್ಧರಿಸಿದೆ. ಇಬ್ಬರು ಮಹಿಳೆಯರು ನನ್ನನ್ನು ಪ್ರೀತಿಸುತ್ತಾರೆ. ನಾನು ಇಬ್ಬರಿಗೂ ದ್ರೋಹ ಮಾಡುವುದಿಲ್ಲ. ಅವರಿಬ್ಬರನ್ನು ಮದುವೆಯಾಗಿ ಶಾಶ್ವತವಾಗಿ ಇಬ್ಬರೊಂದಿಗೆ ವಾಸಿಸಲು ಒಪ್ಪಿರುವುದಾಗಿ ಚಂದು ತಿಳಿಸಿದರು.
ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಹಸಿನಾ ಅವರ ಕುಟುಂಬದ ಸದಸ್ಯರು ಬಂದಾಗ, ಸುಂದರಿ ಕುಟುಂಬದ ಸದಸ್ಯರು ಸಮಾರಂಭದಿಂದ ಹಿಂದುರಿಗಿದರು. ಒಟ್ಟಾರೆ ನಾವು ಮೂವರು ಕೂಡ ರೈತರಾಗಿ ಕೆಲಸ ಮಾಡುವುದರ ಮೂಲಕ ಜೀವನವನ್ನು ಸಂತೋಷದಿಂದ ನಡೆಸುವುದಾಗಿ ಚಂದು ಹೇಳಿದ್ದಾರೆ.