ಪ್ರೀತಿಗೆ ಕುಟುಂಬದವರ ವಿರೋಧ ಪ್ರೇಮಿಗಳು ಆತ್ಮಹತ್ಯೆ

ಹಾವೇರಿ,ಏ.೨೫- ಮನನೊಂದ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಾಗನೂರು ಗ್ರಾಮದಲ್ಲಿ ನಡೆದಿದೆ.
ನಾಗನೂರಿನ ವಿದ್ಯಾಶ್ರೀ ಗಾಳಿ(೨೨), ಇರ್ಷಾದ್ ಕುಡಚಿ(೨೩) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.
ವಿದ್ಯಾಶ್ರೀ ಮತ್ತು ಇರ್ಷಾದ್ ಇಬ್ಬರೂ ಒಬ್ಬರನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಕುಟುಂಬಸ್ಥರ ಒಪ್ಪಿಗೆ ಇರಲಿಲ್ಲ.
ಇತ್ತೀಚೆಗಷ್ಟೇ ವಿದ್ಯಾಶ್ರೀಗೆ ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥ ಆಗಿತ್ತು. ಆದರೆ ಈ ನಿಶ್ಚಿತಾರ್ಥ ಆಕೆಗೆ ಇಷ್ಟ ಇರಲಿಲ್ಲ. ಹೀಗಾಗಿ ನಿನ್ನೆ ಬೆಳಗಿನ ಮುಂಜಾನೆ ನಾಪತ್ತೆಯಾಗಿದ್ದಳು.
ಮಹಿಳಾ ಪೊಲೀಸ್ ಠಾಣೆಯಲ್ಲಿ ವಿದ್ಯಾಶ್ರೀ ಕಾಣೆಯಾಗಿದ್ದ ಬಗ್ಗೆ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದರು.
ಇದರ ಬೆನ್ನಲ್ಲೇ ಇರ್ಷಾದ್ ಕುಟುಂಬಕ್ಕೆ ಸೇರಿದ ಜಮೀನಿನಲ್ಲೇ ಇರ್ಷಾದ್ ಮತ್ತು ವಿದ್ಯಾಶ್ರೀ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದು ಇಂದು ಮೃತದೇಹಗಳು ಪತ್ತೆಯಾಗಿವೆ.
ಸ್ಥಳಕ್ಕೆ ಹಾವೇರಿ ಗ್ರಾಮೀಣ ಠಾಣೆ ಸಿಪಿಐ ನಾಗಮ್ಮ, ಮಹಿಳಾ ಠಾಣೆ ಸಿಪಿಐ ಚಿದಾನಂದ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.