ಪ್ರಿಯಾಂಕ ಮೂಗು ತಂದ ಖಿನ್ನತೆ

ನ್ಯೂಯಾರ್ಕ್,ಮೇ.೪- ಮೂಗಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಬಳಿಕ ನನ್ನ ವೃತ್ತಿ ಜೀವನ ಮುಗಿಯಿತು ಎನ್ನುವ ಆತಂಕದಲ್ಲಿ ಖಿನ್ನತೆಗೆ ಒಳಗಾಗಿದ್ದೆ ಎಂದು ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹೇಳಿದ್ದಾರೆ.

ವೈದ್ಯರು ಶಿಫಾರಸು ಮೇರೆಗೆ ಮೂಗಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದೆ. ಆನಂತರ ಕೆಲವು ದಿನಗಳ ಕಾಲ ಮಾನಸಿಕ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರಿತ್ತು.ಇದರಿಂದ ವೃತ್ತಿ ಜೀವನ ಎಲ್ಲಿ ಅಂತ್ಯವಾಗುವುದೋ ಎನ್ನುವ ಭಯದಿಂದ ಖಿನ್ನತೆಗೆ ಒಳಗಾಗಿದ್ದೆ ಎಂದಿದ್ದಾರೆ.

ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಮೆಟ್‌ಗಾಲ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಆ ಸಮಯ ಜೀವನದಲ್ಲಿ ಕತ್ತಲೆಯ ಸಮಯ ಎಂದು ಹೇಳಿದ್ಧಾರೆ.

ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ತಂದೆಯೂ ಸಲಹೆ ನೀಡಿದ್ದರು. ಒಂದಷ್ಟು ದಿನ ತುಂಬಾ ಕಷ್ಟದ ದಿನ ಎದುರಿಸಿದ್ದೇನೆ. ಆ ನಂತರ ಮನೆಯವರು ಧೈರ್ಯ ತುಂಬಿದ್ದರು. ಆಗ ನಿಧಾನವಾಗಿ ಸರಿದಾರಿಗೆ ಬಂದೆ ಎಂದಿದ್ಧಾರೆ.

ಹುಡುಗನಿಗೆ ಎಚ್ಚರಿಕೆ:

ಹದಿನಾರರ ಹರೆಯದಲ್ಲಿದ್ದಾಗ ಮನೆಯ ಬಾಲ್ಕಿನಿಗೆ ಬಂದಿದ್ದ ಹುಡುಗನಿಗೆ ತಂದೆ ಆಕಾಶ್ ಚೋಪ್ರಾ ಬುದ್ದಿ ಹೇಳುವ ಜೊತೆಗೆ ಮತ್ತೆ ಈ ಕಡೆ ತಲೆಹಾಕದಂತೆ ಹೇಳಿ ಕಳುಹಿಸಿದ್ದರು ಎಂದು ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.

೧೨ನೇ ವರ್ಷಕ್ಕೆ ತಂದೆ ನನ್ನನ್ನು ಅಮೇರಿಕಾದಲ್ಲಿ ವ್ಯಾಸಂಗ ಮಾಡಲು ಕಳುಹಿಸಿದ್ದರು.ಅಲ್ಲಿಂದ ಮುಗಿಸಿ ೧೬ನೇ ವಯಸ್ಸಿಗೆ ಭಾರತಕ್ಕೆ ಹಿಂತಿರುಗಿದ್ದೆ. ಒಂದು ದಿನ ತಾನು ಮಲಗುವ ಕೊಠಡಿಯ ಬಾಲ್ಕನಿ ಬಳಿ ಹುಡುಗನೊಬ್ಬ ನಿಂತಿದ್ದ. ಅದನ್ನು ನೋಡಿ ಕಿರುಚ ತೊಡಗಿದೆ, ಆಗ ತಂದೆ ಬಂದು ಆ ಹುಡುಗನನ್ನು ಅಲ್ಲಿಂದ ಓಡಿಸಿದ್ದರು ಎಂದು ಹೇಳಿದ್ದಾರೆ.

ಈ ಘಟನೆ ಬಳಿಕ ತಂದೆ ಡಾ, ಆಕಾಶ್ ಚೋಪ್ರಾ, ಕಟ್ಟು ನಿಟಾಗಿ ಬೆಳಸಲು ಪ್ರಾರಂಭಿಸಿದರು ಎಂದು ಹೇಳಿದ್ದಾರೆ.

ಪತಿ ನಿಕ್ ಜೋನಾಸ್ ಜೊತೆ ಪ್ರೀತಿ, ಮದುವೆ, ವಿಶ್ವಸುಂದರಿ ಪಟ್ಟ,ಬಾಲಿವುಡ್‌ನಲ್ಲಿ ಸಿಕ್ಕ ಅವಕಾಶ ,ಅಮೇರಿಕಾದಲ್ಲಿ ಓದು, ಮತ್ತು ಅಲ್ಲಿ ಬೆಳೆದ ದಿನಗಳನ್ನು ಪ್ರಿಯಾಂಕ ಚೋಪ್ರಾ ಮೆಲುಕು ಹಾಕಿ ಆ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಅಮೆರಿಕದಲ್ಲಿ ಅಧ್ಯಯನ ಮಾಡಿ ಹದಿಹರೆಯದಲ್ಲಿ ಭಾರತಕ್ಕೆ ಹಿಂದಿರುಗಿದಾಗ ತನ್ನ ತಂದೆ ಡಾ ಅಶೋಕ್ ಚೋಪ್ರಾ ಅವರು ಅಪರಿಚಿತರೊಂದಿಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು,ಮನೆಯಲ್ಲಿದ್ದಾಗ ಕಿಟಕಿ ಬಾಗಿಲು ಬಂದ್ ಮಾಡಿರಬೇಕು ಎಂದು ಕಿವಿ ಮಾತು ಹೇಳಿದ್ದರು ಎಂದು ತಿಳಿಸಿದ್ದಾರೆ.

ನನ್ನ ತಂದೆ ನನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದರು.ಮಗಳಿಗೆ ಒಂಚೂರು ಸಮಸ್ಯೆಯಾದರೂ ಅವರು ಸಹಿಸಿಕೊಳ್ಳುತ್ತಿಲ್ಲ. ಹೀಗಾಗಿ ಅವರು ನನ್ನ ಬಗ್ಗೆ ತುಂಬಾ ಕಾಳಜಿ ವಹಿಸಿದ್ದರು ಎಂದು ಮಾಹಿತಿ ಹಂಚಿಕೊಂಡಿದ್ಧಾರೆ,