ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಾಪ್ ಸಿಂಹ ಹೇಳಿಕೆ ಖಂಡಿಸಿ ಪ್ರತಿಭಟನೆ


ಮೈಸೂರು,ನ.19:- ಸಾಹಿತಿ, ಸಂಗೀತ ನಿರ್ದೇಶಕ ಡಾ.ಹಂಸಲೇಖ ಅವರ ಹೇಳಿಕೆಯನ್ನು ಬೆಂಬಲಿಸಿ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಸಂಸದ ಪ್ರತಾಪ್ ಸಿಂಹ ಹೇಳಿಕೆ ಖಂಡಿಸಿ ಮೈಸೂರು ವಿವಿ ಸಂಶೋಧಕರ ಸಂಘದಿಂದ ಪ್ರತಿಭಟನೆ ನಡೆಯಿತು.
ಮೈಸೂರು ಮಾನಸಗಂಗೋತ್ರಿ ಬಳಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮಾತನಾಡಿ ಹಿಂದೂ ನಾವೆಲ್ಲ ಒಂದು ನಮ್ಮಲ್ಲಿ ಜಾತೀಯತೆ ಅಸ್ಪೃಶ್ಯತೆ ಇಲ್ಲ ಎಂದು ಹೇಳುವವರು ಉಡುಪಿ ಮಠ ಸೇರಿದಂತೆ ಅಷ್ಟಮಠಗಳಿಗೆ ಲಿಂಗಾಯತ, ಒಕ್ಕಲಿಗ , ಕುರುಬ, ನಾಯಕ, ದಲಿತ ಹೀಗೆ ಬೇರೆ ಜಾತಿಯ ಜನರನ್ನು ಮಠಾಧೀಶರಾಗಿ ಪೀಠಾರೋಹಣ ಮಾಡಲಿ. ದಲಿತರು, ಹಿಂದುಳಿದವರಿಗೆ ಮಠಗಳಲ್ಲಿ ಪೂಜಾಕೈಂಕರ್ಯ ಕೈಗೊಳ್ಳಲು ಅದರನ್ನೂ ಪೂಜಾರಿಗಳಾಗಿ ನೇಮಿಸಿಕೊಳ್ಳಲಿ.
ಧರ್ಮ ಸಂಸತ್ ನಡೆಸುವ ಇವರು ಬ್ರಾಹ್ಮಣ ಹಾಗೂ ದಲಿತರ ನಡುವೆ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ. ಬ್ರಾಹ್ಮಣ ಹಾಗೂ ದಲಿತರ ನಡುವೆ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ. ಹಂಸಲೇಖ ಅವರ ಮಾತುಗಳನ್ನು ಸವಾಲಾಗಿ ಸ್ವೀಕರಿಸಿ ದಲಿತರನ್ನು ತಮ್ಮ ಮಠ ಹಾಗೂ ಮನೆಗಳಿಗೆ ಕರೆದು ಸಹಪಂಕ್ತಿ ಭೋಜನ ನಡೆಸಲಿ. ಅದು ಸಾಧ್ಯವಾಗದೇ ಇದ್ದರೆ ತಾವು ಅಸ್ಪೃಶ್ಯತೆಯನ್ನು ಆಚರಿಸುತ್ತೇವೆ ಎಂದು ಅವರು ಒಪ್ಪಿಕೊಳ್ಳಲಿ ಎಂದು ಒತ್ತಾಯಿಸಿದರು.
ಬಹುದೊಡ್ಡ ಹಗರಣವಾಗಿರುವ ಬಿಟ್ ಕಾಯಿನ್ ಬಗ್ಗೆ ಧ್ವನಿ ಎತ್ತಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ತುಂಬಾ ಅವಹೇಳನಕಾರಿಯಾಗಿ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ ಹೇಳಿಕೆ ಖಂಡನೀಯ. ತಂದೆಯ ಹೇಸರೇಳಿಕೊಂಡು ರಾಜಕಾರಣ ಮಾಡುತ್ತಾರೆ ಎನ್ನುವ ನೀವು ಮೋದಿಯವರ ಹೇಸರೇಳಿಕೊಂಡು ರಾಜಕಾರಣ ಮಾಡುತ್ತೀರಲ್ಲ, ನಿಮಗೂ ಅವರಿಗೂ ಏನು ಸಂಬಂಧ ಎಂಬುದನ್ನು ಸ್ಪಷ್ಟಪಡಿಸಿ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಮಹೇಶ್ ಸೋಸಲೆ, ಗುರುಮೂರ್ತಿ, ರಮೇಶ್ ಕೆ.ಪಿ, ಶಿವಕುಮಾರ್. ಶಿವಕುಮಾರ್ ಡಿ.ಕೆ, ರಘು ಬಿ.ಎಲ್, ಸಿದ್ದಪ್ಪಾಜಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.