ಪ್ರಿಯಾಂಕ್ ಖರ್ಗೆ ಆರೋಪದಲ್ಲಿ ಯಾವುದೇ ಹುರುಳಿಲ್ಲ:ಜಾಧವ್

ಕಲಬುರಗಿ,ಡಿ.9-ಶಾಸಕ ಪ್ರಿಯಾಂಕ್ ಖರ್ಗೆ ಅವರು ತಮ್ಮ ವಿರುದ್ಧ ಮಾಡಿರುವ ಆರೋಪಗಳೆಲ್ಲವೂ ಶುದ್ಧ ಸುಳ್ಳು, ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ಸಂಸದ ಡಾ.ಉಮೇಶ್ ಜಾಧವ್ ಹೇಳಿದರು.
ಇಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯಾವುದೇ ದಾಖಲೆಗಳಿಲ್ಲದೆ ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸುತ್ತಿರುವ ಪ್ರಿಯಾಂಕ್ ಖರ್ಗೆ ಅವರಿಗೆ ಲೀಗಲ್ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪ್ರಿಯಾಂಕ್ ಖರ್ಗೆ ಅವರು ಲೀಗಲ್ ನೋಟಿಸ್ ನೀಡಲಿ ಎಂದು ಸವಾಲು ಹಾಕಿದ್ದಾರೆ. ಮತ್ತೆರಡು ಕ್ಲಾರಿಫಿಕೇಶನ್ ಕೊಡುತ್ತೇನೆ ಎಂದಿದ್ದಾರೆ. ಏನೇನು ಕ್ಲಾರಿಫಿಕೇಶನ್ ನೀಡುತ್ತಾರೋ ನೀಡಲಿ ಅದನ್ನು ಸೇರಿಸಿಯೇ ಲೀಗಲ್ ನೋಟಿಸ್ ನೀಡುತ್ತೇನೆ ಎಂದು ಜಾಧವ್ ಹೇಳಿದರು.
ನನ್ನಲ್ಲಿ ಯಾವುದೇ ದ್ವಂದ್ವ ಇಲ್ಲ. ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಸವಣ್ಣನವರ ಹೆಸರಿಡುವ ಬಗ್ಗೆ ಯಾರಿಗೂ ಭರವಸೆ ನೀಡಿಲ್ಲ. ಚುನಾವಣೆ ನಂತರ ಯಾವುದೇ ಭರವಸೆಗಳನ್ನು ನೀಡಲು ಹೋಗಿಲ್ಲ. ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವ ಭರವಸೆ ನೀಡಿದ್ದೆ. ಆ ಭರವಸೆ ಈಡೇರಿಸಲಾಗಿದೆ ಎಂದರು.
ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಸವಣ್ಣನವರ ಹೆಸರಾಗಲಿ, ಸಂತ ಸೇವಾಲಾಲ್ ಅವರ ಹೆಸರಾಗಲಿ ಇಡುವ ಬಗ್ಗೆ ನಾನೆಲ್ಲೂ ಭರವಸೆ ನೀಡಿಲ್ಲ. ಬಸವಣ್ಣ ಮತ್ತು ಸಂತ ಸೇವಾಲಾಲ್ ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಈ ವಿಷಯದಲ್ಲಿ ಸುಳ್ಳು ಆರೋಪ ಮಾಡುವುದರ ಮೂಲಕ ಪ್ರಿಯಾಂಕ್ ಖರ್ಗೆ ಅವರು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಬಸವೇಶ್ವರರ ಹೆಸರಿಡಲು ಜೆ.ಎಚ್.ಪಟೇಲ್ ಸರ್ಕಾರ ನಿರ್ಧರಿಸಿತ್ತು. ಆಗ ಅದಕ್ಕೆ ವಿರೋಧ ವ್ಯಕ್ತಪಡಿಸಿದವರು ಯಾರು ಎಂದು ಜಾಧವ್ ಪ್ರಶ್ನಿಸಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ ಅವರನ್ನು ಸೋಲಿಸಿ ನನ್ನ ಸೋಲಿನ ಸೇಡು ತೀರಿಸಿಕೊಳ್ಳಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ಬಿ.ಜಿ.ಪಾಟೀಲ್ ಅವರು ಗೆಲ್ಲುತ್ತಾರೆ. ಹಾಗಾದರೆ ನೀವು ಸೋಲು ಒಪ್ಪಿಕೊಳ್ಳುತ್ತೀರಾ ಎಂದು ಜಾಧವ್ ಪ್ರಶ್ನಿಸಿದರು.