ಪ್ರಿಯಾಂಕ್‌ ಖರ್ಗೆ ಅವರ ಜುಲೈ ತಿಂಗಳ ವರ್ಕ್ ರಿಪೋರ್ಟ್‌ ‌ಬಿಡುಗಡೆ

ಕಲಬುರಗಿ,ಆ.01:ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಎರಡನೆಯ ತಿಂಗಳ ವರ್ಕ್ ರಿಪೋರ್ಟ್ ಬಿಡುಗಡೆ ಮಾಡಿದ್ದಾರೆ.

“ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ, ಜನರಿಗೆ ಹೆಚ್ಚೆಚ್ಚು ಉತ್ತರದಾಯಿಯಾಗಲು ಕಳೆದ ತಿಂಗಳು ನಾನು ನನ್ನೆಲ್ಲಾ ಕೆಲಸಗಳನ್ನು ಒಳಗೊಂಡ ಮೊದಲ ತಿಂಗಳ ವರ್ಕ್ ರಿಪೋರ್ಟ್ ಬಿಡುಗಡೆ ಮಾಡಿದ್ದೆ. ಇಂದು ಎರಡನೇ ತಿಂಗಳ (ಜುಲೈ) ವರ್ಕ್ ರಿಪೋರ್ಟ್ ಬಿಡುಗಡೆಗೊಳಿಸುತ್ತಿದ್ದೇನೆ.

ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಈ ಅದ್ಭುತ ಜನಾದೇಶ ಸಮರ್ಥವಾಗಿ ಜನಪರ ಕೆಲಸ ಮಾಡುವಂತೆ ನಮಗೆ ಕೊಟ್ಟ ನಿರ್ದೇಶನ ಎಂದು ಭಾವಿಸಿ ನನ್ನ ಕೆಲಸಗಳನ್ನು ಕೇಂದ್ರೀಕರಿಸಿದ್ದೇನೆ. ಆಡಳಿತ ಸ್ವೀಕರಿಸಿ ಎರಡೇ ತಿಂಗಳಾಗಿದ್ದರೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ ಇಲಾಖೆಗಳ ಕಾರ್ಯ ನಿರ್ವಹಣೆಯಲ್ಲಿ ಹಲವಾರು ಗಮನಾರ್ಹ ಬದಲಾವಣೆಗಳನ್ನು ತರುವತ್ತ ನಮ್ಮ ಪ್ರಯತ್ನ ಸಾಗಿದೆ.

ನಮ್ಮ ಎರಡೂ ಇಲಾಖೆಯ ಅಧಿಕಾರಿಗಳು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ನನ್ನೊಂದಿಗೆ ಶ್ರಮ ವಹಿಸಿ ಜನಪರವಾಗಿ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ನಿರಂತರವಾಗಿ ಮುಂದುವರೆಸಿದ್ದಾರೆ.

ನಿಮ್ಮ ಸಲಹೆ, ಸಹನೆ ಹಾಗೂ ಸಹಕಾರ ಪ್ರಬುದ್ಧ ಕರ್ನಾಟಕ ನಿರ್ಮಿಸುವ ನಮ್ಮ ಪ್ರಯತ್ನಕ್ಕೆ ದೊಡ್ಡ ಪ್ರೇರಕ ಶಕ್ತಿ” ಎಂದು ಸಚಿವರು ತಮ್ಮ ರಿಪೋರ್ಟ್ ಕಾರ್ಡ್‌ನಲ್ಲಿ ಹೇಳಿದ್ದಾರೆ.

2023ರ ಜುಲೈ ತಿಂಗಳಲ್ಲಿ ಸಚಿವರು ನಡೆಸಿದ ಸಭೆಗಳು ಹಾಗೂ ಪ್ರವಾಸದ ಸಂಪೂರ್ಣ ಮಾಹಿತಿ ಕೆಳಕಂಡಂತಿವೆ.

ಸಚಿವರು ಜುಲೈ ತಿಂಗಳಿನಲ್ಲಿ ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ವಿವಿಧ ಇಲಾಖೆಯ ಸಚಿವರೊಂದಿಗೆ 17 ಸಭೆಗಳನ್ನು ನಡೆಸಿದ್ದಾರೆ.
ಇದಲ್ಲದೆ, ವಿವಿಧ ನಿಯೋಗಗಳೊಂದಿಗೆ 32 ಸಭೆಗಳನ್ನು ನಡೆಸಿದ್ದರೆ, ಗ್ರಾಮೀಣಾಭಿವೃದ್ಧಿಗೆ ಇಲಾಖೆಗೆ ಸಂಬಂಧಪಟ್ಟ 17 ಸಭೆಗಳಲ್ಲಿ ನಡೆಸಿದ್ದಾರೆ. ಇದರೊಂದಿಗೆ
ಮಾಹಿತಿ ತಂತ್ರಜ್ಞಾನ ಇಲಾಖೆಗೆ ಸಂಬಂಧ ಪಟ್ಟಂತೆ 10 ಸಭೆಗಳನ್ನು ನಡೆಸಿದ್ದಾರೆ.

ವಿಧಾನಸಭಾ ಹಾಗೂ ವಿಧಾನ ಪರಿಷತ್ ಅಧಿವೇಶನದಲ್ಲಿ 17 ದಿನಗಳ ಕಾಲ ಭಾಗಿಯಾಗುವ ಮೂಲಕ ನೂರಕ್ಕೆ ನೂರರಷ್ಟು ಹಾಜರಾತಿಯಾಗಿದ್ದಾರೆ.

ಪಕ್ಷದ ಚಟುವಟಿಕೆ ಕುರಿತ 5 ಸಭೆಗಳಲ್ಲಿ ಪಾಲ್ಗೊಂಡ ಸಚಿವರು, 17 ಮಾಧ್ಯಮ ಸಂದರ್ಶನಗಳನ್ನು ನೀಡಿದ್ದಾರೆ. ಈ ತಿಂಗಳಿನಲ್ಲಿ ಒಂದು ಬಾರಿ ಜಿಲ್ಲಾ ಪ್ರವಾಸ ಕೈಗೊಳ್ಳಲಾಗಿದ್ದು, ಒಂದು ಸಮಾವೇಶದಲ್ಲಿ ಭಾಗವಹಿಸಿದ್ದಾರೆ.

“ಈ ರಿಪೋರ್ಟ್ ಕಾರ್ಡ್‌ನಲ್ಲಿ ನಾನು ಸರ್ಕಾರದ ಮಟ್ಟದಲ್ಲಿ ನಡೆಸಿದ ಸಭೆಗಳು ಹಾಗೂ ಕೈಗೊಂಡ ಪ್ರಮುಖ ನಿರ್ಧಾರಗಳ ಮಾಹಿತಿ ಹಾಗೂ 2023-24 ರ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮತ್ತು ಐಟಿಬಿಟಿ ಇಲಾಖೆಗೆ ಘೋಷಿಸಲಾದ ಯೋಜನೆಗಳೂ ಒಳಗೊಂಡಿವೆ” ಎಂದೂ ಸಚಿವರು ತಮ್ಮ ರಿಪೋರ್ಟ್‌ ಕಾರ್ಡ್‌ನಲ್ಲಿ ಹೇಳಿದ್ದಾರೆ.

ಜುಲೈ ತಿಂಗಳಲ್ಲಿ ಇಲಾಖಾ ವತಿಯಿಂದ ಕೈಗೊಂಡ ಪ್ರಮುಖ ನಿರ್ಧಾರಗಳನ್ನು ಸಹ ಸಚಿವರು ತಮ್ಮ ರಿಪೋರ್ಟ್‌ ಕಾರ್ಡ್‌ನಲ್ಲಿ ನಮೂದಿಸಿದ್ದಾರೆ.

• 10ಕ್ಕೂ ಹೆಚ್ಚು ವಿವಿಧ ಗ್ರಾಮೀಣಾಭಿವೃದ್ಧಿ ನೌಕರರ ಸಂಘಗಳ ಪ್ರತಿನಿಧಿಗಳ ಭೇಟಿ ಮಾಡಿ ಅಹವಾಲು ಸ್ವೀಕಾರ, ತತಕ್ಷಣ ಈಡೇರಿಸಬಹುದಾದ ಎಲ್ಲಾ ಬೇಡಿಕೆಗಳ ಪರಿಶೀಲನೆ ಹಾಗೂ ಕ್ರಮ

• ರಾಜ್ಯದಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗದಂತೆ ಈ ಮೊದಲು ಬಿಡುಗಡೆ ಮಾಡಲಾಗಿದ್ದ ₹1 ಕೋಟಿ ಜೊತೆಗೆ ನಿಯೋಜಿತ ರೂಪುರೇಷೆ (ಕಂಟಿನ್ಜೆನ್ಸಿ ಪ್ಲಾನ್) ವರದಿ ಆಧಾರದಲ್ಲಿ ₹5.4 ಕೋಟಿ ಹಣ ಬಿಡುಗಡೆ

• ಉದಯೋನ್ಮುಖ ತಂತ್ರಜ್ಞಾನಗಳ ಕೌಶಲ್ಯ ಮಂಡಳಿ (Skill Council For Emerging Technologies) ಸ್ಥಾಪನೆಗೆ ಅನುಮೋದನೆ

• ತಂತ್ರಜ್ಞಾನ ಬಳಸಿ ಬೆಂಗಳೂರನ್ನು ಗೇಮ್ ಡೆವಲಪ್ಮೆಂಟ್ ಹಬ್ ಮಾಡುವ ನಿಟ್ಟಿನಲ್ಲಿಇ-ಗೇಮಿಂಗ್‌ ಸಮಿಟ್‌ಗೆ ಕ್ರಮ

• ಕೆಕೆಆರ್ ಡಿಬಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಡೆವಲಪ್ಮೆಂಟ್ ಕಮಿಷನರ್ ನೇತೃತ್ವದಲ್ಲಿ ತನಿಖೆಗೆ ಆದೇಶ

• ಕಲಬುರಗಿ ಕಾರ್ಪೊರೇಷನ್’ನಲ್ಲಿ ನಡೆದ ಅಕ್ರಮ ಕಾಮಗಾರಿಗಳ ಕುರಿತು ತನಿಖೆಗೆ ಆದೇಶ

• ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಹಾಗೂ ಹೆಚ್ಚುವರಿ ಅಡ್ವೋಕೇಟ್ ಜನರಲ್ ಗಳ ವಿಶೇಷ ಸಭೆ ನಡೆಸಿ ಆರ್ಟಿಕಲ್ 371 (J) ಮೀಸಲಾತಿ ಕುರಿತಂತೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ಎಲ್ಲಾ ಸರ್ಕಾರಿ ನೇಮಕಾತಿ ಪ್ರಕರಣಗಳನ್ನು ಫಾಸ್ಟ್ ಟ್ರ್ಯಾಕ್ ಮಾಡಿ ಬಗೆಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ

• ಬಿಯಾಂಡ್ ‌ಬೆಂಗಳೂರು (Beyond Bengaluru) – ಸ್ಥಿರ ಸಮಾಜ ನಿರ್ಮಾಣದ ಮೂಲಕ ಬೆಂಗಳೂರು ಬಿಟ್ಟು ರಾಜ್ಯದ ವಿವಿಧ ನಗರ ಪ್ರದೇಶಗಳಲ್ಲಿ ತಂತ್ರಜ್ಞಾನ ಕಂಪನಿಗಳಿಂದ ಬಂಡವಾಳ ಹೂಡಿಕೆ ಆಕರ್ಷಣೆಗೆ ಕ್ರಮ

• ಫಾಕ್ಸ್ ಕಾನ್ ಗ್ರೂಪ್ ನಿಂದ ₹8,200 ಕೋಟಿ ವೆಚ್ಚದಲ್ಲಿ ಐಫೋನ್ ಹೊರಭಾಗ ಅಸೆಂಬ್ಲಿ ಘಟಕ ಹಾಗೂ ₹2,000 ಕೋಟಿ ವೆಚ್ಚದಲ್ಲಿ ಸೆಮಿ ಕಂಡಕ್ಟರ್ ತಯಾರಿಕಾ ಘಟಕ ಸೇರಿ ಒಟ್ಟು ₹10,200 ಕೋಟಿ ಹೂಡಿಕೆ ದೃಡೀಕರಣ ಒಪ್ಪಂದಕ್ಕೆ ಸಹಿ. ಇದರಿಂದ ರಾಜ್ಯದಲ್ಲಿ ಒಟ್ಟು ಸಾವಿರಾರು ನೂತನ ಉದ್ಯೋಗ ಸೃಷ್ಟಿಗೆ ಕ್ರಮ

• ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ₹2,349 ಕೋಟಿ ವೆಚ್ಚದ SCP/TSP ಅನುದಾನದ 2023-24ನೇ ಸಾಲಿನ ಕ್ರಿಯಾ ಯೋಜನೆಗೆ ಅನುಮೋದನೆ

ಇವು ಜುಲೈ ತಿಂಗಳಲ್ಲಿ ತಾವು ಕೈಗೊಂಡ ಪ್ರಮುಖ ನಿರ್ಧಾರಗಳು ಎಂದು ಸಚಿವರು ತಮ್ಮ ವರ್ಕ್ ರಿಪೋರ್ಟ್ ನಲ್ಲಿ ತಿಳಿಸಿದ್ದಾರೆ.