ಪ್ರಿಯಾಂಕ್‍ಗೆ ಹ್ಯಾಟ್ರಿಕ್ ಕನಸು; ಮಣಿಕಂಠ ಅದೃಷ್ಟ ಪಣಕ್ಕೆ

ಮಹೇಶ್ ಕುಲಕರ್ಣಿ

ಕಲಬುರಗಿ: ಏ.20: ಇಡೀ ರಾಜ್ಯದ ಗಮನ ಸೆಳೆದಿರುವ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ತೀರಾ ಗರಮಾಗರಂ ಸ್ಥಿತಿಗೆ ತಲುಪಿದೆ. ಕಾಂಗ್ರೆಸ್ ಪಕ್ಷದ ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿಯ ಮಣಿಕಂಠ ರಾಠೋಡ್ ಮಧ್ಯೆ ಏರ್ಪಟ್ಟಿರುವ ತುರುಸಿನ ಸ್ಪರ್ಧೆ ತೀವ್ರ ಕದನ ಕುತೂಹಲ ಮೂಡಿಸಿದೆ.

ಬಿಟ್‍ಕಾಯಿನ್ ಹಗರಣ, ಪಿಎಸ್‍ಐ ಅಕ್ರಮ ನೇಮಕಾತಿ ಹಗರಣ, ಗಂಗಾ ಕಲ್ಯಾಣ ಯೋಜನೆಯಲ್ಲಿ ನಡೆದ ವ್ಯಾಪಕ ಅವ್ಯವಹಾರ ಸೇರಿದಂತೆ ಕಾಲಕಾಲಕ್ಕೆ ರಾಜ್ಯ ಸರಕಾರದ ವಿರುದ್ಧ ದತ್ತಾಂಶಗಳೊಂದಿಗೆ ಮುಗಿಬಿದ್ದ ಪ್ರಿಯಾಂಕ್ ಅವರನ್ನು ಈ ಬಾರಿ ವಿಧಾನಸೌಧ ಮೆಟ್ಟಿಲು ಏರದಂತೆ ನೋಡಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ದಿಲ್ಲಿಯಿಂದಲೇ ತೊಡೆ ತಟ್ಟುವ ತಂತ್ರಗಾರಿಕೆಗೆ ಅಗತ್ಯ ಕಸುವು ಒದಗಿಸುವ ಕೆಲಸ ಮಾಡುತ್ತಿದೆ. ಹೀಗಾಗಿ, ಖರ್ಗೆ ಕುಟುಂಬದ ವಿರುದ್ಧ ಸಾರ್ವಜನಿಕವಾಗಿ ಟೀಕೆ ಮಾಡುವ ಎದೆಗಾರಿಕೆ ಪ್ರದರ್ಶಿಸಿದ ಮಣಿಕಂಠ ಅವರನ್ನು ಬಿಜೆಪಿ ಪ್ರಿಯಾಂಕ್ ವಿರುದ್ಧ ಕಣಕ್ಕಿಳಿಸಿದೆ. ಇದರಿಂದಾಗಿ, ಬೇಸಿಗೆ ಅವಧಿಯ ಕೊತಕೊತ ಬಿಸಿಲಿನ ತಾಪಕ್ಕೆ ಹೆಚ್ಚುವರಿಯಾಗಿ ಚುನಾವಣಾ ಕಾವು ಕ್ಷೇತ್ರದಲ್ಲಿ ಮತ್ತಷ್ಟು ಬಿಸಿ ಏರುವಂತೆ ಮಾಡಿದೆ.

ಬಂಡಾಯದ ಲಾಭ-ನಷ್ಟ

ಕಳೆದ ನಾಲ್ಕೈದು ವರ್ಷಗಳಿಂದ ಬಿಜೆಪಿಯ ಟಿಕೆಟ್ ಗಿಟ್ಟಿಸುವ ಇರಾದೆಯೊಂದಿಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರವಿಂದ ಚವ್ಹಾಣ್ ಚಿತ್ತಾಪುರ ಕ್ಷೇತ್ರದಲ್ಲಿ ಓಡಾಡಿದ್ದಾರೆ. ಆದರೆ, ಖರ್ಗೆ ಕುಟುಂಬದ ವಿರುದ್ಧ ಗುಟುರು ಹಾಕುವುದನ್ನೇ ಪ್ರಧಾನ ಮಾನದಂಡ ಎಂದು ಪರಿಗಣಿಸಿದ ಬಿಜೆಪಿ ಹೈಕಮಾಂಡ್ ಈ ಬಾರಿ ಮಣಿಕಂಠ ಕೊರಳಿಗೆ ಬಿಜೆಪಿ ಟಿಕೆಟ್ ತೊಡಿಸಿದೆ. ಈ ವಿದ್ಯಮಾನದ ವಿರುದ್ಧ ಅರವಿಂದ ಬೇಸರ ವ್ಯಕ್ತಪಡಿಸಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನು ಅರವಿಂದ ಬೆನ್ನಿಗೆ ಬೆಂಗಾವಲಾಗಿ ನಿಂತಿದ್ದ ಮಾಜಿ ಶಾಸಕ ಹಾಗೂ ಲಿಂಗಾಯತ ಸಮುದಾಯದ ಹಿರಿಯ ಮುತ್ಸದ್ಧಿ ವಿಶ್ವನಾಥ ಪಾಟೀಲ್ ಹೆಬ್ಬಾಳ್ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರೂ, ತಮ್ಮ ಮುಂದಿನ ಹೆಜ್ಜೆಯ ಕುರಿತು ಎಲ್ಲಿಯೂ ತುಟಿ ಬಿಚ್ಚಿಲ್ಲ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಡೆಯಬಹುದಾದ ಬೆಳವಣಿಗೆಯು ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಪ್ರಬಲ ಲಿಂಗಾಯತ ಮತಗಳು ಹಂಚಿಕೆ ಆಗುವುದನ್ನು ನಿರ್ಧರಿಸಲಿದೆ. ಈ ಮಧ್ಯೆ, ಅರವಿಂದ ಅವರನ್ನು ಸೆಳೆಯಲು ಕಾಂಗ್ರೆಸ್ ಯತ್ನಿಸುತ್ತಿದ್ದು, ಅವರು ಪಕ್ಷ ತ್ಯಜಿಸದಂತೆ ಬಿಜೆಪಿ ಮುಖಂಡರು ತಮ್ಮ ತಂತ್ರ ಹೊಸೆಯುತ್ತಿದ್ದಾರೆ.

ಮತ್ತೊಂದೆಡೆ, ಮಾಜಿ ಶಾಸಕ ದಿ.ವಾಲ್ಮೀಕಿ ನಾಯಕ್ ಅವರ ಪುತ್ರ ವಿಠ್ಠಲ ನಾಯಕ್ ಅವರಿಗೆ ಕ್ಷೇತ್ರದ ಬಹುತೇಕ ಎಲ್ಲ ತಾಂಡಾಗಳಲ್ಲಿ ಉತ್ತಮ ಸಂಬಂಧವಿದೆ. ಇದರ ಜೊತೆಗೆ, ವಾಲ್ಮೀಕ್ ಅವರೊಂದಿಗೆ ಗುರುತಿಸಿಕೊಂಡಿದ್ದ ಹಿರಿಯ ಲಿಂಗಾಯತ ಮುಖಂಡರು ವಿಠ್ಠಲ್ ಬೆನ್ನಿಗೆ ನಿಂತಿರುವುದು ಒಂದೆಡೆಯಾದರೆ, ವಿಠ್ಠಲ್ ನಾಯಕ್ ಈ ಬಾರಿ ಮಣಿಕಂಠ ರಾಠೋಡ್ ಅವರ ಉಮೇದುವಾರಿಕೆಗೆ ನಿಷ್ಠೆ ವ್ಯಕ್ತಪಡಿಸಿರುವುದು ಮಣಿಕಂಠ ಪಾಳೆಯದಲ್ಲಿ ನೆಮ್ಮದಿ ಮೂಡಿಸಿದೆ.

ಏ.20ಕ್ಕೆ ನಾಮಪತ್ರ ಸಲ್ಲಿಕೆಯ ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆಯೇ ಬಿಜೆಪಿ ಮತ್ತು ಕಾಂಗ್ರೆಸ್ ವರಿಷ್ಠರು ಕ್ಷೇತ್ರದಲ್ಲಿ ವಾಸ್ತವ್ಯ ಹೂಡುವುದರಿಂದ ಕ್ಷೇತ್ರದಲ್ಲಿ ಚುನಾವಣಾ ಬಿಸಿ ಮತ್ತಷ್ಟು ಏರಲಿದೆ. ಈ ಮಧ್ಯೆ, ಡಾ.ಸುಭಾಶ್ಚಂದ್ರ ರಾಠೋಡ್ ಅವರು ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ ಘೋಷಿಸಿ ಚುನಾವಣಾ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಹಾಗಾಗಿ, ಡಾ.ರಾಠೋಡ್ ಎಷ್ಟು ಮತಗಳನ್ನು ಸೆಳೆಯಲಿದ್ದಾರೆ ಎಂಬುದು ಕೂಡ ಚುನಾವಣಾ ಫಲಿತಾಂಶದ ಮೇಲೆ ಸ್ವಲ್ಪ ಪರಿಣಾಮ ಬೀರಲಿದೆ.


ಅಭಿವೃದ್ಧಿ ವರ್ಸಸ್ ಹೊಸಮುಖ

ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ 2013 ಮತ್ತು 2018- ಹೀಗೆ ಎರಡು ಬಾರಿ ಗೆಲುವು ಸಾಧಿಸಿರುವ ಪ್ರಿಯಾಂಕ್, ಈ ಉಭಯ ಅವಧಿಗಳಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಸುಮಾರು ರೂ. 4500 ಕೋಟಿ ಅನುದಾನ ತಂದಿದ್ದಾರೆ. ಈ ಪೈಕಿ ಮೊದಲ ಅವಧಿಯಲ್ಲಿ ರೂ.3000 ಕೋಟಿ ಹಾಗೂ ಎರಡನೇ ಅವಧಿಯ ಮೊದಲ ಎರಡು ವರ್ಷಗಳಲ್ಲಿ ಸುಮಾರು ರೂ.1500 ಕೋಟಿ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ತಾಪುರ ಪಟ್ಟಣದ ಹೊರವಲಯದಲ್ಲಿ ತಲೆ ಎತ್ತಿರುವ ಬೃಹತ್ ನ್ಯಾಯಾಲಯ ಸಂಕೀರ್ಣದಿಂದ ಹಿಡಿದು ಬೃಹತ್ ಶಿಕ್ಷಣ ಸಮುಚ್ಚಯ, ಎಸ್ಸಿ-ಎಸ್ಟಿ ಮತ್ತು ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‍ಗಳು, ಗುಣಮಟ್ಟದ ಸಂಪರ್ಕ ರಸ್ತೆಗಳನ್ನು ನಿರ್ಮಿಸಿರುವುದಕ್ಕೆ ಕ್ಷೇತ್ರದಲ್ಲಿ ಭೌತಿಕ ಪುರಾವೆಗಳು ಲಭಿಸುತ್ತವೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ಹೇಳುತ್ತಾರೆ.

ಇನ್ನೊಂದೆಡೆ, ತಮಗೂ ಅವಕಾಶ ಕಲ್ಪಿಸಿದರೆ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಸ ಪರ್ವ ಆರಂಭಿಸುವುದಾಗಿ ಈಗಾಗಲೇ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ತಮ್ಮ ಪ್ರಚಾರದ ವೇಳೆ ಜನರಿಗೆ ಮನದಟ್ಟು ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಪ್ರಿಯಾಂಕ್ ಮತ್ತು ಮಣಿಕಂಠ ಮಧ್ಯದ ಸ್ಪರ್ಧೆ ಹೆಚ್ಚು ಕುತೂಹಲ ಕೆರಳಿಸಿದೆ.


ರವಿಕುಮಾರ್‍ಗೆ ಚಿತ್ತಾಪುರ ಹೊಣೆ

ಬಿಜೆಪಿಯ ಚುನಾವಣಾ ತಂತ್ರಜ್ಞ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರನ್ನು ಚಿತ್ತಾಪುರದ ಚುನಾವಣಾ ಉಸ್ತುವಾರಿಯಾಗಿ ಬಿಜೆಪಿ ಹೈಕಮಾಂಡ್ ಫೀಲ್ಡಿಗಿಳಿಸಿದೆ. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಂದಿನವರೆಗೆ ಸೋಲಿಲ್ಲದ ಸರದಾರ ಎಂದೇ ಕರೆಯಿಸಿಕೊಳ್ಳುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರವಿಕುಮಾರ್ ಅವರಿಗೆ ಈ ಬಾರಿ ಪ್ರಿಯಾಂಕ್ ಅವರನ್ನು ಹಣಿಯುವ ಜವಾಬ್ದಾರಿ ನೀಡಲಾಗಿದೆ. ಈ ಮಧ್ಯೆ, ಚಿತ್ತಾಪುರ ಕ್ಷೇತ್ರದಲ್ಲಿ ಮೊದಲಿನಿಂದಲೂ ಅಭ್ಯರ್ಥಿಯ ಗೆಲುವಿನ ಅಂತರ ಐದು ಸಾವಿರಕ್ಕಿಂತಲೂ ಕಡಿಮೆ ಇರುವ ಕಾರಣಕ್ಕಾಗಿ ಉಭಯ ಪಕ್ಷಗಳ ಮಧ್ಯೆ ಕೊನೆಯ ಕ್ಷಣದವರೆಗೆ ತೀವ್ರ ಹಣಾಹಣಿ ಇದ್ದೇ ಇರುತ್ತದೆ ಎಂದು ಕ್ಷೇತ್ರದ ಹಿರಿಯ ಪತ್ರಕರ್ತರೊಬ್ಬರು ವ್ಯಾಖ್ಯಾನಿಸುತ್ತಾರೆ.


ಜಾತಿವಾರು ಮತದಾರರು

ಲಿಂಗಾಯತರು 56,000-60,000

ಬಂಜಾರ 32,000-35,000

ದಲಿತರು 40,000-42,000

ಕುರುಬ 21,000-23,000

ಮುಸ್ಲಿಂ 32,000-35,000

ಕಬ್ಬಲಿಗ 35,000-37,000

ಗಾಣಿಗ 8000-10,000

ಬ್ರಾಹ್ಮಣ 5000-6000