
ಕಲಬುರಗಿ:ಮೇ.4: ಜಿಲ್ಲೆಯ ಎಲ್ಲ ಒಂಬತ್ತು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಹುರಿಯಾಳುಗಳಿಗೆ ಮತ ನೀಡುವಂತೆ ಕೋರಿ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನಗರದಲ್ಲಿ ಬುಧವಾರ ಸಂಜೆ ಭರ್ಜರಿ ರೋಡ್ ಶೋ ನಡೆಸಿದರು.
ಮಂಗಳವಾರ ಸಂಜೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಯಾಚನೆಗೆ ಪೂರಕವಾಗಿ ರೋಡ್ ಶೋ ಕೈಗೊಂಡ ಬೆನ್ನಲ್ಲೇ ಪ್ರಿಯಾಂಕಾ ಬುಧವಾರ ಸಂಜೆ ಕಾಂಗ್ರೆಸ್ ಪಕ್ಷದ ಪರವಾಗಿ ರೋಡ್ ಶೋ ಕೈಗೊಂಡು ಗಮನ ಸೆಳೆದರು.
ಕಲಬುರಗಿಯ ನಗರೇಶ್ವರ ಶಾಲೆ ಎದುರಿನ ರಸ್ತೆಯಿಂದ ತೆರೆದ ವಾಹನದಲ್ಲಿ ರೋಡ್ ಶೋ ಆರಂಭಿಸಿದ ಪ್ರಿಯಾಂಕಾ ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ತುಂಬಿದ್ದ ಜನರತ್ತ ಕೈ ಬೀಸಿ ಮುಗುಳ್ನಗೆ ಚೆಲ್ಲಿದರು. ಸಂಜೆ 6.30ಕ್ಕೆ ಆರಂಭಗೊಂಡ ಮೆರವಣಿಗೆಯು ಸೂಪರ್ ಮಾರ್ಕೆಟ್ ಪ್ರದೇಶದ ಕಿರಾಣಾ ಬಜಾರ್, ಚೌಕ್ ಪೊಲೀಸ್ ಠಾಣೆ ರಸ್ತೆ ಮೂಲಕ ಹಾದು ಜಗತ್ ವೃತ್ತವನ್ನು ತಲುಪಿದರು.
ಕೇವಲ 45 ನಿಮಿಷಗಳ ಕಾಲ ರೋಡ್ ಶೋ ನಡೆಸಿದ ಬಳಿಕ ಜಗತ್ ವೃತ್ತಕ್ಕೆ ಆಗಮಿಸುತ್ತಿದ್ದಂತೆಯೇ ಬಂಜಾರಾ ಸಮುದಾಯದ ಮಹಿಳೆಯರು ಪೂರ್ಣಕುಂಭ ಹೊತ್ತು ಪ್ರಿಯಾಂಕಾ ಅವರಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತ ಕೋರಿದರು. ಬಳಿಕ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, ಪ್ರಧಾನಿ ಮೋದಿ ಅವರಿಗೆ ಬಡವರು, ಕಾರ್ಮಿಕರು ಮತ್ತು ನಿತ್ಯ ದುಡಿದು ತಿನ್ನುವವರ ಕಷ್ಟಗಳು ಗೊತ್ತಾಗುತಿಲ್ಲ. ಅವರಿಗೆ ಏನಿದ್ದರೂ ತಮ್ಮ ಗೆಳೆಯ ಅದಾನಿಯ ಚಿಂತೆ ಮಾತ್ರ ಕಾಡುತ್ತಿದೆ. ಹಾಗಾಗಿ, ನಿತ್ಯ ಗೌತಮ್ ಅದಾನಿ ರೂ.1600 ಕೋಟಿ ಗಳಿಸುತ್ತಿದ್ದರೆ, ಈ ದೇಶದ ಬಡ ಕಾರ್ಮಿಕ ಕೇವಲ ರೂ. 27 ಗಳಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಡುಗೆ ಅನಿಲ ಸಿಲಿಂಡರ್ ಬೆಲೆ ಗಗನಕ್ಕೇರಿದೆ. ಮತ್ತೊಂದೆಡೆ ನೋಟ್ ಬ್ಯಾನ್ ಹಾಗೂ ಜಿಎಸ್‍ಟಿ ಕಾರಣದಿಂದಾಗಿ ವ್ಯಾಪಾರಿಗಳು, ಮಧ್ಯಮ ವರ್ಗದವರು ತ್ರಾಸು ಅನುಭವಿಸುವಂತಾಗಿದೆ. ಈ ಅವ್ಯವಸ್ಥೆಯ ಮಧ್ಯೆ ರಾಜ್ಯದಲ್ಲಿ ಶೇ.40ರಷ್ಟು ಕಮಿಷನ್ ಕೊಳ್ಳೆ ಹೊಡೆಯುವ ಸರಕಾರ ಅಸ್ತಿತ್ವದಲ್ಲಿದೆ ಎಂದು ಪ್ರಿಯಾಂಕಾ ವಾದ್ರಾ ಟೀಕಿಸಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಪ್ರಿಯಾಂಕ್ ಖರ್ಗೆ, ಡಾ.ಅಜಯ್‍ಸಿಂಗ್, ಕನೀಜ್ ಫಾತಿಮಾ, ಅಲ್ಲಮಪ್ರಭು ಪಾಟೀಲ್ ಅವರು ಪ್ರಿಯಾಂಕಾ ರೋಡ್ ಶೋಗೆ ತೆರೆದ ವಾಹನದಲ್ಲಿ ಸಾಥ್ ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ್ ಗುತ್ತೇದಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಲಬುರಗಿ ಜಿಲ್ಲೆ ಸೇರಿದಂತೆ ಇಡೀ ಕಲ್ಯಾಣ ಕರ್ನಾಟಕದ ಪ್ರಗತಿಗಾಗಿ ಮಲ್ಲಿಕಾರ್ಜುನ ಖರ್ಗೆಯವರು ಸಾಕಷ್ಟು ದುಡಿದಿದ್ದಾರೆ. ಹಾಗಾಗಿ, ಈ ಬಾರಿ ಬಿಜೆಪಿ ಸರಕಾರವನ್ನು ಕಿತ್ತೆಸೆಯುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು.
-ಪ್ರಿಯಾಂಕಾ ಗಾಂಧಿ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಎಐಸಿಸಿ