ಪ್ರಿಯಕರನ ಪ್ರೇಮ ನಿವೇದನೆ ಒಪ್ಪಿದ ಯುವತಿ ೬೫೦ ಅಡಿ ಪ್ರಪಾತಕ್ಕೆ ಬಿದ್ದು ಬಚಾವ್

ವಿಯೆನ್ನಾ,ಜ.೩-ಪ್ರೇಯಸಿಗೆ ಪ್ರೀತಿಯನ್ನು ವಿಭಿನ್ನವಾಗಿ ವ್ಯಕ್ತಪಡಿಸಬೇಕೆಂದು ಆಸೆ ಪಡುವುದು ತಪ್ಪಲ್ಲ. ಆದರೆ, ಪ್ರೇಮ ನಿವೇದನೆ ಮಾಡುವಾಗ ಆಯ್ದುಕೊಳ್ಳುವ ದಾರಿಯ ಮೇಲೆ ಸ್ವಲ್ಪ ಎಚ್ಚರ ವಹಿಸುವುದು ಸೂಕ್ತ. ಇಲ್ಲವಾದಲ್ಲಿ ಏನು ನಡೆಯಬಹುದು ಎನ್ನುವುದಕ್ಕೆ ಆಸ್ಟ್ರೀಯಾದ ಕರಿಂಥಿಯಾ ನಗರದಲ್ಲಿನ ಘಟನೆ ಸಾಕ್ಷಿಯಾಗಿದೆ.
ಆಸ್ಟ್ರೀಯಾದ ಕರಿಂಥಿಯಾ ನಗರದಲ್ಲಿ ರೊಮ್ಯಾಂಟಿಕ್ ಪ್ರೇಮ ನಿವೇದನೆಯೊಂದು ದುರಂತದಲ್ಲಿ ಅಂತ್ಯವಾಗಬೇಕಾಗಿರುವುದು ಅದೃಷ್ಟವಶಾತ್ ಯಾವುದೇ ಸಾವು ನೋವಿಗೆ ಕಾರಣವಾಗಿಲ್ಲ.
ವಿಭಿನ್ನ ರೀತಿಯಲ್ಲಿ ಪ್ರೇಮ ನಿವೇದನೆ ಮಾಡಬೇಕೆಂದುಕೊಂಡ ೨೭ ವರ್ಷದ ವ್ಯಕ್ತಿ ೩೨ ವರ್ಷದ ಪ್ರೇಯಸಿಯನ್ನು ಡಿ.೨೭ ರಂದು ಆಸ್ಟ್ರೀಯಾದ ಫಲ್ಕರ್ಟ್ ಬೆಟ್ಟದ ತುದಿಗೆ ಕರೆದೊಯ್ದಿದ್ದ. ಒಂದು ದಿನ ಮುಂಚಿತವಾಗಿಯೇ ಬೆಟ್ಟದ ಮೇಲೆ ಪ್ರೇಮಿಗಳು ಟ್ರೆಕ್ಕಿಂಗ್ ಮಾಡಿದ್ದರು. ಬಳಿಕ ಬೆಟ್ಟದ ತುದಿಯಲ್ಲಿ ಮಂಡಿಯೂರಿ ಪ್ರೇಯಸಿಗೆ ತನ್ನ ಹೃದಯದ ಮಾತು ಹೇಳಿದ್ದಾನೆ.
ಖುಷಿಯಿಂದಲೇ ಒಪ್ಪಿಕೊಂಡ ಯುವತಿ ತಕ್ಷಣವೇ ಆಯತಪ್ಪಿ ೬೫೦ ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದಾಳೆ. ಅದೃಷ್ಟವಶಾತ್ ಹಿಮದ ಮೇಲೆ ಬಿದ್ದಿದ್ದರಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಪ್ರೇಯಸಿ ಬೀಳುವುದನ್ನು ತಡೆಯಲು ಯತ್ನಿಸಿದ ಪ್ರಿಯಕರನೂ ಸಹ ಕಾಲುಜಾರಿ ಗಾಳಿಯಲ್ಲಿ ಸುಮಾರು ೫೦ ಅಡಿ ಆಳದಲ್ಲಿ ಬೀಳುವಾಗ ಬಂಡೆಯ ಅಂಚನ್ನು ಹಿಡಿದುಕೊಂಡು ಬಚಾವ್ ಆಗಿದ್ದಾನೆ.
ಮಹಿಳೆ ತುಂಬಾ ಆಳಕ್ಕೆ ಬಿದ್ದಿದ್ದರಿಂದ ಆಕೆ ಪ್ರಜ್ಞೆ ತಪ್ಪಿದ್ದಳು. ದಾರಿಹೋಕರು ನೋಡಿ ತುರ್ತುಸೇವೆಗೆ ಕರೆ ಮಾಡಿ ರಕ್ಷಿಸಿದರೆ, ಆಕೆಯ ಪ್ರಿಯಕರನನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಯಿತು. ಇಬ್ಬರ ಅದೃಷ್ಟ ಚೆನ್ನಾಗಿದ್ದರಿಂದ ಭಾರೀ ದುರಂತದಿಂದ ಬಚಾವ್ ಆಗಿದ್ದಾರೆ.
ಒಂದು ವೇಳೆ ಪ್ರಪಾತದ ಅಡಿಯಲ್ಲಿ ಹಿಮವಿರದಿದ್ದರೆ ಅಲ್ಲಿನ ಪರಿಸ್ಥಿತಿಯೇ ಬೇರೆ ಇರುತ್ತಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ. ಇನ್ನು ಇಂತಹ ಪ್ರಕರಣಗಳು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಕೆಲವರು ಬಿದ್ದು ಸಾವಿಗೀಡಾದ ಉದಾಹರಣೆಗಳಿವೆ ಎಂದು ತಿಳಿದುಬಂದಿದೆ.