ಪ್ರಿಯಕರನ ಜೊತೆ ಸೇರಿ ಪತಿ ಕೊಂದ ಪತ್ನಿಗೆ ಶೋಧ

ಬೆಳಗಾವಿ,ಜೂ.6-ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಕೊಲೆ ಮಾಡಿ ಅಪಘಾತದಂತೆ ಬಿಂಬಿಸಿದ ದಾರುಣ ಘಟನೆ‌ ಮುಗಳಿಹಾಳದಲ್ಲಿ ನಡೆದಿದೆ.
ಸವದತ್ತಿಯ ಯರಗಟ್ಟಿ ತಾಲೂಕಿನ ಮುಗಳಿಗಾಳದ ಲಕ್ಷ್ಮಣ ತಿಪ್ಪಣ್ಣಾ ಪುಂಜಿ (38)‌ಕೊಲೆಯಾದವರು. ಮೃತನ ಪತ್ನಿ ಉದ್ಧವ್ವ ಪುಂಜಿಯು ಪ್ರಿಯಕರ ಸವದತ್ತಿ ತಾಲೂಕಿನ ಮುಳ್ಳಿಕೇರಿಯ ಅರ್ಜುನ್​ ಆರೇರ್ ಜೊತೆಗೆ ಸೇರಿ ಕೊಲೆ ಮಾಡಿದ್ದಾಳೆ.
ಪತ್ನಿಯ ಅಕ್ರಮದ ವಿಷಯ ಪತಿ ಲಕ್ಷ್ಮಣಗೆ ತಿಳಿದಿದ್ದು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಪತ್ನಿ ಕೊಲೆ ಮಾಡಲು‌ ಸಂಚು ರೂಪಿಸಿದ್ದಳು.
ಅದರಂತೆ ಕಳೆದ ಎರಡು ದಿನಗಳ ಹಿಂದೆ ಜೂ.4ರಂದು ಮನೆಗೆ ಕರೆಯಿಸಿಕೊಂಡು ಕುತ್ತಿಗೆಗೆ ಹಗ್ಗವನ್ನು ಬಿಗಿದು ಕೊಲೆ ಮಾಡಿದ್ದಾರೆ.
ಅಪಘಾತ ಎಂದು ಬಿಂಬಿಸಲು ಮೃತನ ದೇಹವನ್ನು ಆತನ ಬೈಕ್ ಮೇಲೆಯೇ ಇಟ್ಟುಕೊಂಡು ಘಟಪ್ರಭಾ ಬಲದಂಡೆ ಕಾಲುವೆಯಲ್ಲಿ ಬೈಕ್ ಸಮೇತ ಎಸೆದು ಅಪಘಾತವಾಗಿದೆ‌ ಎಂಬುದನ್ನು ತೋರಿಸಲು ಪ್ರಯತ್ನಿಸಿದ್ದರು.
ಕೊಲೆಯಾದ ಬಗ್ಗೆ ಮೃತನ ಸಹೋದರ ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸ್ಥಳಕ್ಕೆ ಬೇಟಿ ನೀಡಿದ ಡಿವೈಎಸ್​ಪಿ ರಾಮನಗೌಡ ಹಟ್ಟಿ, ಸಿಪಿಐ ಮಂಜುನಾಥ ನಡವಿನಮನಿ, ಪಿಎಸ್ಐ ಪ್ರವೀಣ್ ಗಂಗೋಳ್ಳಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಪೊಲೀಸರಿಗೆ ಪ್ರಾಥಮಿಕ ತನಿಖೆಯಲ್ಲಿ ಪತ್ನಿಯೇ ಕೊಲೆಯಲ್ಲಿ ಭಾಗಿಯಾಗಿರುವುದು ಪತ್ತೆ ಆಗಿದ್ದು, ಇಬ್ಬರು ಆರೋಪಿಗಳಿಗೆ ಸಿಬ್ಬಂದಿ ಬಲೆ ಬೀಸಿದ್ದಾರೆ. ಈ‌ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.