ಮಾಸ್ಕೋ, ಜೂ.೨೭- ರಷ್ಯಾ ಸೇನೆಯ ವಿರುದ್ಧವೇ ದಂಗೆ ಏಳಲು ಹವಣಿಸಿದ್ದ ಖಾಸಗಿ ಸೇನೆ ವ್ಯಾಗ್ನರ್ ಗುಂಪಿನ ಮುಖಂಡ ಯೆವಗಿನಿ ಪ್ರಿಗೊಝಿನ್ ಸದ್ಯ ಬೆಲಾರೂಸ್‌ಗೆ ಗಡೀಪಾರಾಗಲಿದ್ದು, ಆದರೆ ಅವರ ಜತೆಗಿದ್ದ ಯೋಧರ ಭವಿಷ್ಯ ಸದ್ಯ ಅನಿಶ್ಚಿತತೆಯಲ್ಲಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದೆ. ಮೂಲಗಳ ಪ್ರಕಾರ ದಂಗೆ ಕಾರಣವಾಗಿದ್ದ ಹಲವು ನಾಯಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಸಾಧ್ಯತೆ ಇದೆ.
ಬಂಡಾಯ ಶಮನಕ್ಕೆ ಬೆಲಾರುಸ್ ಮಧ್ಯಸ್ಥಿಕೆಯಲ್ಲಿ ನಡೆದ ಒಪ್ಪಂದದಂತೆ ಪ್ರಿಗೊಝಿನ್ ಬೆಲಾರುಸ್‌ಗೆ ತೆರಳಲು ರಷ್ಯಾ ಸೇನೆ ಅವಕಾಶ ನೀಡಲಿದೆ. ಬಂಡೆದ್ದ ಪ್ರಿಗೊಝಿನ್ ಅವರನ್ನು ಬೆಂಬಲಿಸಲು ನಿರಾಕರಿಸಿದ್ದ ವ್ಯಾಗ್ನರ್ ಗುಂಪಿನ ಯೋಧರು ರಷ್ಯಾ ಸೇನೆಯಲ್ಲಿ ಕಾರ್ಯ ನಿರ್ವಹಿಸುವ ಕರಾರಿಗೆ ಸಹಿಹಾಕಲಿದ್ದು ರಷ್ಯಾ ಸೇನೆಯ ನಿಯಂತ್ರಣದಲ್ಲಿ ಕೆಲಸ ಮಾಡುತ್ತಾರೆ. ಆದರೆ ಪ್ರಿಗೊಝಿನ್ ಅವರನ್ನು ಬೆಂಬಲಿಸಿದ್ದ ವ್ಯಾಗ್ನರ್ ಯೋಧರ ಭವಿಷ್ಯವೇನು? ಅವರೂ ಪ್ರಿಗೊಝಿನ್ ಜತೆ ಬೆಲಾರುಸ್‌ಗೆ ತೆರಳಿದರೆ, ಅಲ್ಲಿ ಮತ್ತೆ ಗುಂಪನ್ನು ಸಂಘಟಿಸಿ ರಷ್ಯಾಕ್ಕೆ ಮತ್ತೆ ಬೆದರಿಕೆ ಒಡ್ಡುವ ಎಲ್ಲಾ ಸಾಧ್ಯತೆಗಳಿವೆ. ಆದ್ದರಿಂದ ಪ್ರಿಗೊಝಿನ್ ಬೆಂಬಲಿಗರನ್ನು ಬೆಲಾರುಸ್‌ಗೆ ಗಡೀಪಾರು ಮಾಡಲು ರಷ್ಯಾ ಒಪ್ಪುವ ಸಾಧ್ಯತೆಯಿಲ್ಲ ಎಂದು ರಕ್ಷಣಾ ವಿಶ್ಲೇಷಕರ ಹೇಳಿಕೆ ಉಲ್ಲೇಖಿಸಿ ವರದಿ ಹೇಳಿದೆ. ಬಂಡಾಯ ಶಮನವಾಗಿರಬಹುದು. ಆದರೆ ಇದು ಖಂಡಿತಾ ಪುಟಿನ್‌ಗೆ ಆಗಿರುವ ಹಿನ್ನಡೆಯಾಗಿದೆ ಮತ್ತು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಪರಿಣಾಮ ಬೀರಲಿದೆ. ಪ್ರಿಗೊಝಿನ್ ಬೆಲಾರುಸ್‌ಗೆ ಗಡೀಪಾರಾಗಬಹುದು. ಆದರೆ ಇದು ಪ್ರಿಗೊಝಿನ್ ಮತ್ತು ವ್ಯಾಗ್ನರ್ ಗುಂಪಿನ ಅಂತ್ಯ ಎಂದು ಹೇಳಲು ಸಾಧ್ಯವಿಲ್ಲ ಎಂದು ಬ್ರಿಟನ್ ಸಶಸ್ತ್ರದಳದ ಮಾಜಿ ಮುಖ್ಯಸ್ಥ ಲಾರ್ಡ್ ರಿಚರ್ಡ್ ಡನಾಟ್ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಮುಂದಕ್ಕೆ ರಷ್ಯಾ ಸೇನೆಯ ಪರವಾಗಿ ಹೋರಾಡಲು ಮುಂದೆ ಬರುವ ಖಾಸಗಿ ಗುಂಪುಗಳು ದೇಶದ ರಕ್ಷಣಾ ಇಲಾಖೆಯ ಜತೆ ಒಪ್ಪಂದಕ್ಕೆ ಸಹಿ ಹಾಕಬೇಕಾಗುತ್ತದೆ. ಈ ಷರತ್ತನ್ನು ಪ್ರಿಗೊಝಿನ್ ಒಪ್ಪಿರಲಿಲ್ಲ. ಶನಿವಾರ ಮಾಸ್ಕೋ ಪ್ರದೇಶದ ೨೦೦ ಕಿ.ಮೀ ಒಳಗಿನವರೆಗೆ ಪ್ರಿಗೊಝಿನ್ ನೇತೃತ್ವದ ಬಂಡುಗೋರರು ನುಗ್ಗಿಬಂದಿದ್ದರು. ಈ ಸಂದರ್ಭ ರೊಸ್ತೋವ್ ನಗರದ ಜನತೆ ಪ್ರಿಗೊಝಿನ್ ಪಡೆಯನ್ನು ಹರ್ಷೋದ್ಗಾರದೊಂದಿಗೆ ಸ್ವಾಗತಿಸಿರುವುದು ಪುಟಿನ್ ಆಡಳಿತಕ್ಕೆ ನೀಡಿರುವ ನೇರ ಎಚ್ಚರಿಕೆಯಾಗಿದೆ. ಆದರೆ ರಷ್ಯಾದ ಭದ್ರತಾ ಪಡೆಯ ಒಂದು ಭಾಗ ತಮ್ಮೊಂದಿಗೆ ನಿಲ್ಲಲಿದೆ ಎಂಬ ನಿರೀಕ್ಷೆ ಹುಸಿಯಾದಾಗ ಪ್ರಿಗೊಝಿನ್ ಸಂಧಾನಕ್ಕೆ ಒಪ್ಪಿದ್ದರು. ತಕ್ಷಣವೇ ಅವರನ್ನು ಬಂಧಿಸುವಂತೆ ರಷ್ಯಾ ಆಡಳಿತ ಆದೇಶಿಸಿತ್ತು. ಬಂಡಾಯ ಶಮನಗೊಳಿಸುವಲ್ಲಿ ಪುಟಿನ್ ಯಶಸ್ವಿಯಾಗಿರಬಹುದು. ಆದರೆ ಈ ವಿದ್ಯಮಾನ ಕಠಿಣ, ನಿಷ್ಠುರ ಆಡಳಿತಗಾರ ಎಂಬ ಅವರ ಇಮೇಜ್ಗೆ ಘಾಸಿತಂದಿದೆ ಮತ್ತು ರಶ್ಯ ಸೇನಾವ್ಯವಸ್ಥೆಯಲ್ಲಿನ ದೌರ್ಬಲ್ಯವನ್ನು ಜಾಹೀರುಗೊಳಿಸಿದೆ ಎಂದು ವಿಶ್ಲೇಷಿಸಲಾಗಿದೆ. ರಶ್ಯ ರಕ್ಷಣಾ ಸಚಿವ ಸೆರ್ಗೆಯ್ ಶೊಯಿಗು ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದ ಪ್ರಿಗೊಝಿನ್ ರಶ್ಯ ಸೇನೆಯ ವಿರುದ್ಧ ಬಂಡೇಳಲು ಸಿದ್ಧತೆ ನಡೆಸುತ್ತಿರುವ ಮಾಹಿತಿ ಕೆಲ ದಿನಗಳ ಹಿಂದೆಯೇ ಅಮೆರಿಕದ ಗುಪ್ತಚರ ಇಲಾಖೆಗೆ ಲಭಿಸಿತ್ತು. ರಶ್ಯ ಗಡಿಭಾಗದಲ್ಲಿ ವ್ಯಾಗ್ನರ್ ಗುಂಪು ತನ್ನ ಬಲ ಹೆಚ್ಚಿಸಿಕೊಳ್ಳುತ್ತಿರುವುದನ್ನು ಗುಪ್ತಚರ ಇಲಾಖೆ ಗಮನಿಸಿತ್ತು. ರಶ್ಯದ ವಶದಲ್ಲಿರುವ ಉಕ್ರೇನ್ ಪ್ರಾಂತದ ಮೇಲೆ ಶುಕ್ರವಾರ ರಶ್ಯ ನಡೆಸಿದ ಕ್ಷಿಪಣಿ ದಾಳಿಯಲ್ಲಿ ವ್ಯಾಗ್ನರ್ನ ಶಿಬಿರ ಧ್ವಂಸಗೊಂಡಿದ್ದು ಇದರಿಂದ ಕೆರಳಿದ ಪ್ರಿಗೊಝಿನ್ ರಶ್ಯ ಸೇನೆಯ ವಿರುದ್ಧ ತಿರುಗಿನಿಂತರು ಎಂದು ವರದಿ ಹೇಳಿದೆ.
ಪ್ರಿಗೊಝಿನ್ ವಿರುದ್ಧದ ಪ್ರಕರಣ ರದ್ದಿಲ್ಲ
ರಷ್ಯಾ ಸೇನೆಯ ವಿರುದ್ಧ ಬಂಡೆದ್ದಿದ್ದ ವ್ಯಾಗ್ನರ್ ಗುಂಪಿನ ಮುಖಂಡ ಯೆವಗಿನಿ ಪ್ರಿಗೊಝಿನ್ ಬೆಲಾರುಸ್‌ಗೆ ಸ್ಥಳಾಂತರಗೊಂಡರೂ ಅವರ ವಿರುದ್ಧದ ಪ್ರಕರಣ ರದ್ದಾಗದು ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ವರದಿ ಹೇಳಿದೆ. ರಷ್ಯಾ ಮಿಲಿಟರಿಯ ಉನ್ನತ ಮುಖಂಡರ ವಿರುದ್ಧ ಸಶಸ್ತ್ರ ಬಂಡಾಯದ ನೇತೃತ್ವ ವಹಿಸಿದ ಪ್ರಕರಣದಲ್ಲಿ ಪ್ರಿಗೊಝಿನ್ ವಿಚಾರಣೆ ಎದುರಿಸಲೇಬೇಕು. ಪ್ರಿಗೊಝಿನ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣದಲ್ಲಿ ಅವರು ಫೆಡರಲ್ ಸೆಕ್ಯುರಿಟಿ ಸರ್ವಿಸ್ ನೇತೃತ್ವದಲ್ಲಿ ನಡೆಯುವ ತನಿಖೆ ಎದುರಿಸಬೇಕಾಗುತ್ತದೆ ಎಂದು ನ್ಯಾಯಾಂಗದ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.