ಪ್ರಿಗೊಝಿನ್ ಅಂತ್ಯಸಂಸ್ಕಾರ

ಮಾಸ್ಕೋ, ಆ.೩೦- ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧವೇ ದಂಗೆ ಏಳುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡು, ಬಳಿಕ ವಿವಾದಾತ್ಮಕ ರೀತಿಯಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ ವ್ಯಾಗ್ನರ್ ಗ್ರೂಪ್ ಮುಖ್ಯಸ್ಥ ಯಾವ್ಗೆನಿ ಪ್ರಿಗೊಝಿನ್ ಅವರನ್ನು ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿ ಸಮಾಧಿ ಮಾಡಲಾಗಿದೆ. ಅತ್ಯಂತ ಖಾಸಗಿಯಾಗಿ ನಡೆದ ಅಂತ್ಯಸಂಸ್ಕಾರದಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಭಾಗಿಯಾಗಿದ್ದರು ಎನ್ನಲಾಗಿದೆ.
ಮಾಸ್ಕೋ ಬಳಿ ಆಗಸ್ಟ್ ೨೩ ರಂದು ನಡೆದ ವಿಮಾನ ಅಪಘಾತದಲ್ಲಿ ಪ್ರಿಗೊಝಿನ್, ಅವರ ಬಲಗೈ ಬಂಟ ಸೇರಿದಂತೆ ೧೦ ಮಂದಿ ಮೃತಪಟ್ಟಿದ್ದರು. ಆದರೆ ಬಳಿಕ ಪ್ರಿಗೊಝಿನ್ ಸಾವಿನ ಬಗ್ಗೆ ಪಾಶ್ಚಿಮಾತ್ಯ ಮಾಧ್ಯಮಗಳು ಹತ್ತು ಹಲವು ರೀತಿಯಲ್ಲಿ ವರದಿ ಮಾಡಿದ್ದವು. ಪ್ರಿಗೋಜಿನ್ ಮೃತಪಟ್ಟಿರುವ ಬಗ್ಗೆ ಕೂಡ ಸಂಶಯ ವ್ಯಕ್ತಪಡಿಸಿ ವರದಿ ಮಾಡಿತ್ತು. ಆದರೆ ಮೊನ್ನೆ ನಡೆದ ಅನುವಂಶಿಕ ಪರೀಕ್ಷೆಯಲ್ಲಿ ಪ್ರಿಗೊಝಿನ್ ಸಾವನಪ್ಪಿರುವುದು ಖಚಿತಗೊಂಡಿದೆ ಎಂದು ರಷ್ಯಾದ ತನಿಖಾ ಸಂಸ್ಥೆಗಳು ಸ್ಪಷ್ಟನೆ ನೀಡಿದೆ. ಸದ್ಯ ಪ್ರಿಗೊಝಿನ್ ಅವರ ಮೃತದೇಹ ಅಂತ್ಯಸಂಸ್ಕಾರವನ್ನು ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿ ಅತ್ಯಂತ ಖಾಸಗಿಯಾಗಿ ನಡೆಸಲಾಗಿದೆ. ಅಲ್ಲದೆ ವ್ಯಾಗ್ನರ್ ಗ್ರೂಪ್ ಕೂಡ ಪ್ರಿಗೊಝಿನ್ ಅಂತ್ಯಸಂಸ್ಕಾರದ ಬಗ್ಗೆ ತಿಳಿಸಿದ್ದು, ಹೆಚ್ಚಿನ ಮಾಹಿತಿ ಕೂಡ ನೀಡಿಲ್ಲ.