ಪ್ರಾರ್ಥನೆಗಳಲ್ಲಿ ದೊಡ್ಡಮಟ್ಟದ ಶಕ್ತಿಯಿದೆ: ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ: ನ.6:ಪ್ರಾರ್ಥನೆಗಳಲ್ಲಿ ದೊಡ್ಡಮಟ್ಟದ ಶಕ್ತಿಯಿದೆ. ಆಸ್ಪತ್ರೆಗಳಲ್ಲಿ ವಾಸಿಯಾಗದ ಅದೆಷ್ಟೋ ಕಾಯಿಲೆಗಳು ಪ್ರಾರ್ಥನೆಗಳಿಂದ ವಾಸಿಯಾಗುತ್ತವೆ. ನಿರ್ಮಲ ಮನಸ್ಸಿನಿಂದ ಪ್ರಾರ್ಥಿಸಿದರೆ ಅದೆಷ್ಟೋ ನೆಮ್ಮದಿ ಸಿಗುತ್ತದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಬೆಳೂರಿನ ಹಮಾಲ ಕಾಲೋನಿಯಲ್ಲಿ ಶುಕ್ರವಾರ ನಡೆದ ‘ಕಿಂಗ್ ಆಫ್ ಕಿಂಗ್ಸ್ ಮಿನಿಸ್ಟ್ರಿಯ 9ನೇ ವಾರ್ಷಿಕೋತ್ಸವ ಕಾರ್ಯಕ್ರಮ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಂದಿರ, ಮಸೀದಿ, ಚರ್ಚ್ ಗಳು ಪ್ರಾರ್ಥನಾ ಮಂದಿರಗಳಾಗಿವೆ. ನಿರ್ಮಲ ಮನಸ್ಸಿನಿಂದ ದೇವರನ್ನು ಪೂಜಿಸಿ, ಪ್ರಾರ್ಥಿಸಿದರೆ ಮನಸ್ಸಿಗೆ ನೆಮ್ಮದಿ ಸಿಕ್ಕಂತಾಗುತ್ತದೆ. ಪ್ರಾರ್ಥನೆಗೆ ಮೊಡ್ಡಮಟ್ಟದ ಶಕ್ತಿಯಿದೆ ಎಂದರು.
ಯೇಸುಕ್ರಿಸ್ತ ಹುಟ್ಟಿರುವ ಬಗ್ಗೆ ಮೊದಲಿಗೆ ಸಂದೇಶ ನೀಡಿರುವುದು ಕುರುಬ ಸಮುದಾಯವಾಗಿದೆ. ನಾನು ಈ ಮಾತನ್ನು ಯಾವಾಗಲೂ ಹೇಳ್ತಿರ್ತಿನಿ. ಕ್ರಿಶ್ಚಿಯನ್ ಸಮುದಾಯ ಮತ್ತು ಕುರುಬ ಸಮುದಾಯದ ನಡುವೆ ಬಹಳ ವರ್ಷಗಳ ನಂಟು ಇದೆ. ಅದು ದೇವರು ಸೃಷ್ಟಿಸಿದ ನಂಟಾಗಿದೆ. ಅವರವರ ಧರ್ಮ, ಸಮುದಾಯಗಳ ತತ್ವಸಿದ್ದಾಂತಗಳನ್ನು ಅವರವರು ಪಾಲನೆ ಮಾಡುತ್ತಿರುತ್ತಾರೆ.
ಇತ್ತಿಚ್ಛೆಗೆ ನಡೆದ ಜೆಡಿಎಸ್ ಪಕ್ಷದ ಕಾರ್ಯಾಗಾರದ ಸಂದರ್ಭದಲ್ಲಿ ಕ್ರೈಸ್ತ ಸಮುದಾಯದ ಮುಖಂಡರದ್ದು ಒಂದು ದಿನ ಕಾರ್ಯಗಾರ ಮಾಡಲಾಗಿದೆ. ಆ ಕಾರ್ಯಾಗಾರದಲ್ಲಿ ಈ ಸಮುದಾಯದ ಅನೇಕರು ಭಾಗವಹಿಸಿದ್ದರು. ಸಮುದಾಯದ ಪರವಾಗಿ ಜೆಡಿಎಸ್ ಪಕ್ಷ ಹಾಗೂ ಕುಮಾರಸ್ವಾಮಿರವರು ಧ್ವನಿ ಎತ್ತುವ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ.
ನಾನು ಕೆಲಸ ಕಾರ್ಯಗಳನ್ನು ಮಾಡಲು ಯಾವತ್ತೂ ಕೂಡ ಹಿಂದೇಟು ಹಾಕಿಲ್ಲ. ಈಗಿನ ಸರ್ಕಾರದಲ್ಲಿ ಬಹಳಷ್ಟು ಕಡಿಮೆ ಅನುದಾನ ಸಿಗುತ್ತಿದೆ. ಸಂದರ್ಭಕ್ಕೆ ಅನುಸಾರವಾಗಿ ಸಾಧ್ಯವಾದಷ್ಟು ಅನುದಾನ ಹಾಗೂ ವೈಯಕ್ತಿಕ ಸಹಾಯ ನೀಡುವ ಕೆಲಸವನ್ನು ನಾನು ಮಾಡುತ್ತಾ ಬಂದಿದ್ದೇನೆ.
ಕ್ರಿಶ್ಚಿಯನ್ ಸಮುದಾಯ ಸೇರಿದಂತೆ ಪ್ರತಿಯೊಂದು ಸಮುದಾಯಕ್ಕೂ ಬಹಳಷ್ಟು ಅನುದಾನ ನೀಡಿದ್ದೇನೆ. ಸಮುದಾಯದ ಮುಖಂಡರುಗಳು ಬೇಡಿಕೆ ಸಲ್ಲಿಸಿದ ಸಂದರ್ಭದಲ್ಲಿ ಅವುಗಳನ್ನು ಪೂರೈಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಬರುವ ಅನುದಾನವನ್ನು ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳುವ ಕೆಲಸ ಮಾಡಬೇಕಾಗಿದ್ದು, ಎಲ್ಲಾ ಸಮುದಾಯಗಳನ್ನು ಪರಿಗಣಿಸುವ ಕೆಲಸ ಮಾಡುತ್ತಿದ್ದೇನೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಈ ಸಂದರ್ಭದಲ್ಲಿ ಪಾಸ್ಟರ್ ಸಾವನ್ ಪೌಲ್, ಸಿಸ್ಟರ್ ನಿರ್ಮಲಾ ಪೌಲ್, ಪಾಸ್ಟರ್ ರಿಶ್ ಡಿ ಕನಾವಳ್ಳಿ ವಿಜಯಪುರ, ಪಾಸ್ಟರ್ ಅನಿಲ್ ಸೇರಿದಂತೆ ಕ್ರಿಶ್ಚಿಯನ್ ಸಮುದಾಯದ ಧರ್ಮಗುರುಗಳು, ಮುಖಂಡರು ಇದ್ದರು.