ಪ್ರಾಯೋಗಿಕ ಕಲಿಕೆಯಿಂದ ಮಾತ್ರ ಪರಿಣಾಮಕಾರಿ ಜ್ಞಾನ ಸಾಧ್ಯ-ಡಾ.ಚಲುವರಾಜ್


ಸಂಜೆವಾಣಿ ವಾರ್ತೆ
ಹೊಸಪೇಟೆ ಫೆ8: ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ತರಗತಿಗಳ ಒಳಗಿನ ಕಲಿಕೆಗಿಂತ ಪ್ರಾಯೋಗಿಕ ಕಲಿಕೆ ಎನ್ನುವುದು ಬಹು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಆಧುನಿಕ ತಂತ್ರಜ್ಞಾನದ ಮೂಲಕ ಪ್ರಾಯೋಗಿಕ ಕಲಿಕೆಯಲ್ಲಿ ಮುಂದಿದೆ ಎಂದು ಸಮಾಜ ವಿಜ್ಞಾನಗಳ ನಿಕಾಯದ ಡೀನರಾದ ಡಾ. ಚಲುವರಾಜು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ನುಡಿಕಟ್ಟದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಬಸವೇಶ್ವರ ಕಲಾ ಮಹಾವಿದ್ಯಾಲಯ ಬಾಗಲಕೋಟೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರೇಡಿಯೋ ಮತ್ತು ಟೆಲಿವಿಷನ್ ಕಾರ್ಯಕ್ರಮಗಳ ನಿರ್ಮಾಣ ಕುರಿತ ರಾಜ್ಯ ಮಟ್ಟದ ಮೂರು ದಿನಗಳ ತರಬೇತಿ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ, ಮಾತನಾಡಿ ನಮ್ಮ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಪ್ರಾಯೋಗಿಕ ಕಲಿಕೆಗೆ ಬಹುದೊಡ್ಡ ಪ್ರಯೋಗಾಲಯವಾಗಿದೆ. ಇಂದು ವಿಭಾಗವು ಹಮ್ಮಿಕೊಂಡಿರುವ ಈ ಕಾರ್ಯಾಗಾರವು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸವಲ್ಲಿ ಮೊದಲ ಹೆಜ್ಜೆಯನ್ನಿರಿಸಿದೆ. ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಮತ್ತು ಸಕ್ರಿಯ ಭಾಗವಹಿಸುವಿಕೆ ಮುಖ್ಯ. ಸಮಾಜದ ಆರೋಗ್ಯವನ್ನು ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದು. ಪತ್ರಕರ್ತ ಇಂದು ವರದಿಗಾರನಲ್ಲದೆ ಸಾಹಿತಿಯೂ, ವಿಮರ್ಶಕನು, ಸಂಶೋಧಕನು ಹಾಗೂ ವಿಜ್ಞಾನಿಯೂ ಆಗಿದ್ದಾನೆ. ಇಂದು ಪತ್ರಿಕಾರಂಗದಲ್ಲಿ ಭಾಷೆಯ ಕಲಿಕೆ, ಪ್ರೌಡಿಮೆ ಅಗತ್ಯವಿದೆ ಇದಕ್ಕೆ ವಿದ್ಯಾರ್ಥಿಗಳು ಹೆಚ್ಚು ಒತ್ತು ನೀಡಬೇಕು. ಇದರ ಜೊತೆಗೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಕಡೆ ಮುಖ ಮಾಡಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಎಸ್.ವೈ. ಸೋಮಶೇಖರ್ ಅವರು ಮಾತನಾಡುತ್ತ, ಕನ್ನಡ ವಿಶ್ವವಿದ್ಯಾಲಯವು ಕನ್ನಡ ನಾಡು-ನುಡಿ, ಸಂಸ್ಕೃತಿ ಅಧ್ಯಯನ, ಅಧ್ಯಾಪನ, ಪ್ರಕಟಣೆಗೆ  ಗುರಿ ಹೊಂದಿತ್ತು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವನ್ನು ಆರಂಭಿಸುವ ಮೂಲಕ ಪ್ರಚಾರ ಮತ್ತು ಪ್ರಸಾರ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಕರ್ನಾಟಕದಲ್ಲಿಯೇ ಸುಸಜ್ಜಿತವಾದ ಮತ್ತು ಅತ್ಯಾಧುನಿಕ ರೇಡಿಯೋ ಮತ್ತು ಟೆಲಿವಿಷನ್ ಕೇಂದ್ರವನ್ನು ಹೊಂದಿದ ವಿಶ್ವವಿದ್ಯಾಲಯ ನಮ್ಮದಾಗಿದೆ. ಇಂದು ನಮ್ಮ ವಿಭಾಗವು ಕನ್ನಡ ವಿಶ್ವವಿದ್ಯಾಲಯದ ಪ್ರಮುಖ ಕಾರ್ಯಕ್ರಮಗಳ ಜೊತೆಗೆ ವಿಶ್ವಪ್ರಸಿದ್ಧ ಹಂಪಿ ಉತ್ಸವದಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ ತನ್ನ ಛಾಪು ಮೂಡಿಸಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಾಪಕರಾದ ಡಾ. ಲೋಕೇಶ್ ಎಸ್.ಕೆ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಈರಯ್ಯಾ ಬಿ ಚಿಕ್ಕಮಠ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪತ್ರಿಕೋದ್ಯಮ ವಿಭಾಗದ ಅಧ್ಯಾಪಕರಾದ ಪದ್ಮಾವತಿ ಕೆ, ಮತ್ತು ಛಾಯಾಗ್ರಾಹಕರಾದ ಅಭಿರೂಪ್ ಎಂ.ಟಿ, ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಅಧ್ಯಾಪಕರಾದ ಮಹಾಂತೇಶ. ಪಿ. ದೊಡವಾಡ, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಮಣಿಕಂಠ ಹಿರೇವ್ಮಠ ನಿರೂಪಿಸಿದರು. ಬಸವರಾಜ ಐ.ಪಿ. ಅವರು ಸ್ವಾಗತಿಸಿದರು. ಪ್ರವೀಣ ಕುಮಾರ್ ಕೆ ವಂದಿಸಿದರು.