ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಿ :ಕುಡಚಿ


ಧಾರವಾಡ ಜ: 8 : ಪತ್ರಿಕೋದ್ಯಮ ವಿದ್ಯಾರ್ಥಿಗಳು ಸದಾ ಹೊಸತನ್ನು ಮಾಡುವ ತುಡಿತ ಹೊಂದಿರಬೇಕು. ಹಾಗೂ ಪತ್ರಿಕೋದ್ಯಮದಲ್ಲಿ ಪಠ್ಯಕ್ಕಿಂತ ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಬೆಂಗಳೂರಿನ ಕಾಪ್9 ಇವೆಂಟ್ಸ್ ಸಂಸ್ಥೆಯ ಸಿಇಓ, ಮಾಧ್ಯಮ ತಜ್ಞ ವಿಶ್ವನಾಥ ಕುಡಚಿ ಹೇಳಿದರು.
ಕವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಆಯೋಜಿಸಿದ್ದ ಸಂವಹನ ಕೂಟದ ಮುಖ್ಯ ಅತಿಥಿಗಳಾಗಿ ಆಗಮಸಿದ ಅವರು, ಮಾಧ್ಯಮ ಸ್ಥಿತಿ-ಗತಿ ವಿಷಯದ ಕುರಿತು ಮಾತನಾಡಿದ ಅವರು ಆಂಗ್ಲ ಕನ್ನಡ ಭಾಷಾ ಮೇಲೆ ಪ್ರಭುತ್ವ ಸಾಧಿಸಲು ಈಗಿನಿಂದಲೇ ಸಿದ್ಧಗೊಳ್ಳಬೇಕಿದೆ ,ಸ್ನಾತಕೋತ್ತರ ಪದವಿ ಅಧ್ಯಯನದ ವೇಳೆ ವಿದ್ಯಾರ್ಥಿಗಳೆಲ್ಲ ಅಂಕಗಳಿಗೆ ಮಹತ್ವ ನೀಡದೆ, ಬೌದ್ಧಿಕ ಬೆಳವಣಿಗೆಗೆ ಮಹತ್ವ ನೀಡಬೇಕು ಹಾಗೂ ಸದಾ ಪ್ರಶ್ನೆ ಕೇಳುವ ಮನೋಭಾವನೆ ಬೆಳೆಸಿಕೊಳ್ಳಬೇಕೆಂಬ ಸಲಹೆ ನೀಡಿದರು.
ಇಂದಿನ ಬಹುತೇಕ ಮಾಧ್ಯಮಗಳು ಡಿಜಿಟಲ್ ಆವೃತ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದರಿಂದ ಭಾವಿ ಪತ್ರಕರ್ತರು ಬರವಣಿಗೆಯ ಜೊತೆಗೆ ಹಿನ್ನೆಲೆ ಧ್ವನಿ, ನಿರೂಪಣೆ ಹಾಗೂ ವಿಡಿಯೋ ಎಡಿಟಿಂಗ್ ಕುರಿತ ಜ್ಞಾನ ಹೊಂದಿರುವುದು ಅತ್ಯವಶ್ಯಕ ಎಂದರು. ಇದರೊಂದಿಗೆ ಸಾಮಾಜಿಕ ಜಾಲತಾಣಗಳ ಸದುಪಯೋಗದ ಕುರಿತು ವಿವರಿಸಿ, ಅದರಿಂದಲೇ ಹಣಗಳಿಸುವ ಮಾರ್ಗವನ್ನೂ ವಿದ್ಯಾರ್ಥಿಗಳಿಗೆ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥ ಡಾ. ಜೆ. ಎಂ. ಚಂದುನವರ ಮಾತನಾಡಿ, ವಿಶ್ವನಾಥ ಕುಡಚಿ ಅವರ ಪತ್ರಿಕೋದ್ಯಮ ಪಯಣವೇ ಯುವ ಪತ್ರಕರ್ತರಿಗೊಂದು ದಾರಿದೀಪ. ಪತ್ರಿಕೆ, ರೆಡಿಯೋ, ಟಿವಿ, ಧಾರವಾಹಿ, ಸಿನೇಮಾ, ಜಾಹೀರಾತು ಹಾಗೂ ಮೀಡಿಯಾ ಇನ್ಫೋಟೆಕ್ ಸೇರದಂತೆ ಹಲವು ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ವಿಶ್ವನಾಥ ಅವರು ನಮ್ಮ ವಿಭಾಗದ 1987 ವರ್ಷದ 5ನೇ ಬ್ಯಾಚ್ ವಿದ್ಯಾರ್ಥಿಯಾಗಿರುವುದು ನಮಗೆಲ್ಲ ಹೆಮ್ಮೆ ಎಂದರು.ಇಂದಿನ ಮಾಧ್ಯಮಲೋಕದಲ್ಲಿ ಕೆಲಸಗಳಿಗೆ ಕೊರತೆಯಿಲ್ಲ. ಆದರೆ ಆ ಕೆಲಸಗಳಿಗೆ ಸೂಕ್ತ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು..ವಿಭಾಗದ ವಿದ್ಯಾರ್ಥಿ ಆನಂದ ಗಡೇಕರ್ ಮುಖ್ಯ ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿದರು. ಕು. ಸೌಮ್ಯ ಜಾಯಕ್ಕನವರ ನಿರೂಪಿಸಿದರು. ಕು. ಸುಜಾತಾ ಜೋಡಳ್ಳಿ ವಂದಿಸಿದರು.