ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ರೈತರಿಗೆ ಸಕಾಲಕ್ಕೆ ಬೀಜ, ರಸಗೊಬ್ಬರ ಪೂರೈಸಿ : ಜಿಲ್ಲಾಧಿಕಾರಿ ಡಾ.ಸುಶೀಲ.ಬಿ

ಯಾದಗಿರಿ : ಮೇ. 23 : ದೇಶದ ಬೆನ್ನೆಲುಬಾಗಿರುವ ರೈತರ ಜೀವನವು ಕೃಷಿಯ ಮೇಲೆಯೇ ಅವಲಂಬಿತವಾಗಿದ್ದು ಅವರಿಗೆ ಮೋಸವಾಗದಂತೆ ಸಕಾಲಕ್ಕೆ ಗುಣಮಟ್ಟದ ಬೀಜ ಮತ್ತು ರಸಗೊಬ್ಬರ ಪೂರೈಸಲು ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

 ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮುಂಗಾರು ಹಂಗಾಮಿನ ಪೂರ್ವ ಸಿದ್ದತೆಗಳ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಬೀಜ ರಸಗೊಬ್ಬರಗಳ ಪೂರೈಕೆದಾರರ ಪ್ರತಿನಿಧಿಗಳೊಂದಿಗೆ ನಡೆದ  ಜಿಲ್ಲಾಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.
 ಪ್ರಸ್ತುತ ಮುಂಗಾರು ಆಶಾದಾಯಕವಾಗಿದ್ದು ಈಗಾಗಲೇ ಉತ್ತಮ ಮಳೆಯಾಗಿರುತ್ತದೆ ರೈತರು ಭೂಮಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದು ರೈತರಿಗೆ ಪಾರದರ್ಶಕವಾಗಿ ಬೀಜ ಮತ್ತು ರಸಗೊಬ್ಬರವನ್ನು ಪೂರೈಕೆ ಆಗುವಂತೆ ಕೃಷಿ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
 ಜಿಲ್ಲೆಯಲ್ಲಿ ಅತಿ ಹೆಚ್ಚು ಕ್ಷೇತ್ರದಲ್ಲಿ ಹತ್ತಿ ಬಿತ್ತನೆ ಆಗುತ್ತಿದ್ದು, ಮಾರುಕಟ್ಟೆಯಲ್ಲಿ ಹತ್ತಿ ಬಿತ್ತನೆ ಬೀಜಗಳ ಕೃತಕ ಅಭಾವ ಸೃಷ್ಟಿಸುವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
 ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹತ್ತಿ ಬೀಜಗಳ ಗುಣಮಟ್ಟವನ್ನು ಪರಿಶೀಲಿಸಲು ಕೃಷಿ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಕ್ರಮ ಕೈಗೊಳ್ಳಲು ಸೂಚಿಸಿದರು.
 ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನುವಿರುವ ಬೀಜ ಮತ್ತು ಪರಿಕರಗಳ ಬಗ್ಗೆ ರೈತರಿಗೆ ಆಗಿಂದಾಗೆ ಮಾಹಿತಿಯನ್ನು ನೀಡುವುದು ಮತ್ತು ದರಪಟ್ಟಿಗಳನ್ನು ರೈತರಿಗೆ ಕಾಣುವಂತೆ ಪ್ರದರ್ಶಿಸಲು ಸೂಚಿಸಿದರು.
 ಜಿಲ್ಲೆಯಲ್ಲಿ ಅಧಿಕ ರಸ ಗೊಬ್ಬರಗಳ ಬಳಕೆ ಮಾಡುತ್ತಿದ್ದು ಮಿತವ್ಯಯ ರಸಗೊಬ್ಬರಗಳ ಬಳಕೆ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವುದು ಮತ್ತು ನ್ಯಾನೋ ಏರಿಯ ನ್ಯಾನೋ ಡಿಎಪಿಗಳ ಬಳಕೆ ಬಗ್ಗೆ ಹೆಚ್ಚಿನ ಪ್ರಚಾರವನ್ನು ನೀಡಲು ಸಭೆಯಲ್ಲಿದ್ದ ರಸಗೊಬ್ಬರ ಪೂರೈಕೆದಾರ ಪ್ರತಿನಿಧಿಗಳಿಗೆ ಸೂಚಿಸಿದರು.
 ರೈತರಿಗೆ ಅನಾವಶ್ಯಕವಾಗಿ ಬೇಡಿಕೆ ಇಲ್ಲದ ರಸ ಗೊಬ್ಬರಗಳನ್ನು ಒತ್ತಾಯ ಪೂರಕವಾಗಿ ನೀಡಬಾರದು ಎಂದು ಎಚ್ಚರಿಸಿದ ಅವರು ಕಳೆದ ಸಾಲಿನ ಬಾಕಿ ಇರುವ ಬೆಳೆ ವಿಮೆ ಪ್ರಕರಣಗಳನ್ನು ಶೀಘ್ರವೇ ಇತ್ಯರ್ಥಪಡಿಸಿ ರೈತರಿಗೆ ಬೆಳೆ ವಿಮೆ ಪರಿಹಾರ ಜಮೆ ಆಗುವಂತೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಸೂಚಿಸಿದರು.
 ಜಂಟಿ ಕೃಷಿ ನಿರ್ದೇಶಕರ ಅವರು ಮಾತನಾಡಿ, ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ವಿವಿಧ ಬೆಳೆಗಳಿಗೆ ಒಟ್ಟು 402674 ಹೇಕ್ಟರಷ್ಟು ಬಿತ್ತನೆ ಗುರಿ ಹೊಂದಿದ್ದು ಪ್ರಮುಖವಾಗಿ ಹತ್ತಿ-186297, ಭತ್ತ-101406, ತೊಗರಿ-84500 ಹೆಸರು-18694 ಬಿತ್ತನೆ ಗುರಿ ಹೊಂದಲಾಗಿದೆ ಎಂದರು.
 ಜಿಲ್ಲೆಯಲ್ಲಿ ಈಗಾಗಲೇ ಉತ್ತಮ ಮಳೆಯಾಗಿದ್ದು ರೈತರು ಭೂಮಿ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಪ್ರಸ್ತುತ ಹಂಗಾಮಿಗೆ ಬಿತ್ತನೆ ಗುರಿಗೆ ಬೇಕಾಗಿರುವ ಬಿತ್ತನೆ ಬೀಜಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು  ಮಾಡಲಾಗಿದೆ.
 ಮುಂಗಾರು ಹಂಗಾಮಿಗೆ ಜಿಲ್ಲೆಗೆ ಒಟ್ಟು 130278 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಬೇಡಿಕೆ ಇದ್ದು. ಪ್ರಸ್ತುತ 56601 ಮೆಟ್ರಿಕ್ ಟನ್ ಗಳಷ್ಟು ವಿವಿಧ ರಸಗೊಬ್ಬರಗಳ ದಾಸ್ತಾನು ಇರುತ್ತದೆ ಜಿಲ್ಲೆಯಲ್ಲಿ ಬೀಜ ಮತ್ತು ರಸಗೊಬ್ಬರಗಳ ಯಾವುದೇ ಕೊರತೆ ಇರುವುದಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.
 ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಜಂಟಿ ಕೃಷಿ ನಿರ್ದೇಶಕ ಕೆ. ಹೆಚ್ ರವಿ, ಉಪ ಕೃಷಿ ನಿರ್ದೇಶಕಿ ಮಂಜುಳ ಬಸವರಾಜ್, ಜಿಲ್ಲಾ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷರಾದ ಬಸನಗೌಡ ಮಾಲಿ ಪಾಟೀಲ್ ಮರ್ಕಲ್ ಹಾಗೂ ಎಲ್ಲಾ ತಾಲೂಕಿನ ಅಧ್ಯಕ್ಷರು,   ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ, ತಾಂತ್ರಿಕ ಅಧಿಕಾರಿ ರವಿ, ಶಹಪುರ, ಸುರಪುರ ಮತ್ತು ಯಾದಗಿರಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.