ಪ್ರಾಮಾಣಿಕ ಕೆಲಸದಿಂದ ಯಶಸ್ಸು: ಸುಗುಣೇಂದ್ರತೀರ್ಥ ಶ್ರೀ

ಮೈಸೂರು, ಜು.22:- ಜೀವನ ಯೋಜಿತ ರೀತಿಯಲ್ಲಿ ನಡೆಯದು. ಹೀಗಾಗಿ ನಿರೀಕ್ಷೆಗಳು ಈಡೇರದಿದ್ದರೆ ಕೊರಗುತ್ತ ಕೂರಬಾರದು. ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಆಗ ಮಾತ್ರ ಯಶಸ್ಸು ಸಾಧ್ಯ’ ಎಂದು ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು.
ಸರಸ್ವತಿಪುರಂನ ಶ್ರೀಕೃಷ್ಣಧಾಮದಲ್ಲಿ ಶ್ರೀಕೃಷ್ಣ ಮಿತ್ರ ಮಂಡಳಿ ಹಾಗೂ ಶ್ರೀಕೃಷ್ಣ ಟ್ರಸ್ಟ್ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 60ನೇ ಜನ್ಮದಿನದ ಅಭಿವಂದನೆ ಸ್ವೀಕರಿಸಿದ ಅವರು ಮಾತನಾಡಿದರು.
60 ವರ್ಷ ತುಂಬಿದಾಗ ಜೀವನ ವಿಮರ್ಶೆ ಮಾಡುತ್ತೇವೆ. ಅಲ್ಲಿಯವೆರಗೂ ಆ ಯೋಚನೆಯನ್ನೇ ಮಾಡಿರುವುದಿಲ್ಲ. ಜೀವನದಿಂದ ಪಡೆದ ಅನುಭವದ ಅರಿವಿನ ಬೆಳಕನ್ನು ಇತರರಿಗೂ ಹಂಚುವ ಕೆಲಸ ಮಾಡಬೇಕು' ಎಂದು ಸಲಹೆ ನೀಡಿದರು. ನಾವಂದುಕೊಂಡ ಯೋಜನೆ ಕಾರ್ಯಗತವಾಗುವುದಿಲ್ಲ. ನಾವು ಖಗೋಳ ವಿಜ್ಞಾನಿಯಾಗಲು ಬಯಸಿದ್ದೆವು, ಆದರೆ ಸ್ವಾಮೀಜಿಗಳಾದೆವು. ಆಗದ್ದಕ್ಕೆ ದುಃಖ ಪಟ್ಟು, ಸೇವೆಯ ಅಮೂಲ್ಯ ಅವಕಾಶ ಕಳೆದುಕೊಳ್ಳಬಾರದು. ದೇವರು ನಡೆಸಿದಂತೆಯೇ ನಡೆಯಬೇಕು. ಅವನು ಕೊಟ್ಟ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿದರೆ, ಸಾಧನೆಯ ದಾರಿ ತೆರೆದುಕೊಳ್ಳುತ್ತಾ ಸಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಭ್ರಮೆಯಲ್ಲಿ ಬದುಕದೇ ವಾಸ್ತವದಲ್ಲಿ ನಡೆಯಬೇಕು. ನಡೆದು ಬಂದ ದಾರಿಯನ್ನು ಸಿಂಹಾವಲೋಕನ ಮಾಡಬೇಕು. ಸುಖ?ದುಃಖಗಳನ್ನು ಸಮದೃಷ್ಟಿಯಲ್ಲಿ ನೋಡಬೇಕು' ಎಂದು ಸಲಹೆ ನೀಡಿದರು. ವಿದ್ವಾನ್ ಬಿ.ಗೋಪಾಲಾಚಾರ್ಯ ಮಾತನಾಡಿಸುಗುಣೇಂದ್ರತೀರ್ಥ ಸ್ವಾಮೀಜಿ ದೇವರು ಜನರ ಸೇವೆಯೊಂದಿಗೆ ಸಾಹಿತ್ಯ ಸೇವೆಯನ್ನೂ ಮಾಡಿದ್ದಾರೆ. ಭಾರತೀಯ ಸಂಸ್ಕೃತಿ ಉಳಿವಿಗೆ ದೇಶ ವಿದೇಶದಲ್ಲಿ ತಿರುಗಾಟ ನಡೆಸಿದ್ದಾರೆ. ಸಾಂಸ್ಕೃತಿಕ ರಾಯಭಾರಿಗಳಾಗಿದ್ದಾರೆ’ ಎಂದು ಪ್ರಶಂಸಿಸಿದರು.
ಇದೇ ಸಂದರ್ಭದಲ್ಲಿ ಮಹಾಪೌರರಾದ ಸುನಂದಾ ಪಾಲನೇತ್ರ, ಬಿಜೆಪಿ ಮುಖಂಡ ಎಚ್ ವಿ ರಾಜೀವ್, ಶ್ರೀ ಕಷ್ಟ ಮಿತ್ರ ಮಂಡಳಿ ಅಧ್ಯಕ್ಷರಾದ ಸುಬ್ರಹ್ಮಣ್ಯ ತಂತ್ರಿ, ಲೇಖಕ ಕಬ್ಬಿನಾಲೆ ವಸಂತ್ ಭಾರದ್ವಾಜ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ ಪ್ರಕಾಶ್ ಹಾಗೂ ಇನ್ನಿತರರು ಹಾಜರಿದ್ದರು.