ಪ್ರಾಮಾಣಿಕ ಅಧಿಕಾರಿಗಳಿಂದ ಪ್ರಗತಿ ಸಾಧ್ಯ

ಕೋಲಾರ,ಆ. ೧- ಸಾರ್ವಜನಿಕ ಸೇವೆಯಲ್ಲಿ ಬದ್ದತೆ,ಜನಪರ ಕಾಳಜಿ ಅಗತ್ಯವಿದ್ದು, ಅಂತಹ ಅಧಿಕಾರಿಗಳು ಮಾಡುವ ಒಳ್ಳೆಯ ಕೆಲಸಗಳನ್ನು ನಾಗರೀಕರು ಪ್ರೋತ್ಸಾಹಿಸುವ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಸಹಕಾರ ನೀಡಿ, ಕೋಲಾರದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ದುಡಿಯೋಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್ ಕರೆ ನೀಡಿದರು.
ನಗರದ ತಮ್ಮ ಕಚೇರಿಯಲ್ಲಿ ಜಿಲ್ಲಾ ನಾಗರೀಕ ವೇದಿಕೆಯಿಂದ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ನಾನು ಕೋಲಾರದಲ್ಲಿ ಹೆಚ್ಚುವರಿಯಾಗಿ ಯಾವೂದೇ ಕೆಲಸ ಮಾಡಿಲ್ಲ. ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ, ನೀವು ನನ್ನ ಮತ್ತು ಪೊಲೀಸ್ ಇಲಾಖೆಯ ಕೆಲಸವನ್ನು ಗುರುತಿಸಿರುವುದಕ್ಕೆ ಧನ್ಯವಾದಗಳು ಎಂದರು.
ಕೋಲಾರದ ಅಂತರಗಂಗೆಯಲ್ಲಿರುವ ಸರ್ಕಾರಿ ಜಮೀನು ಅರಣ್ಯ ಇಲಾಖೆಯ ಜಂಗಲ್ ಫಾರೆಸ್ಟ್ ಸಂಸ್ಥೆಯಿಂದ ಉತ್ತಮವಾಗಿ ಅಭಿವೃದ್ದಿ ಪಡಿಸಿ, ಪ್ರವಾಸಿತಾಣವಾಗಿ ಮಾಡಬಹುದಾಗಿದೆ, ಈ ಸಂಬಂಧ ಡಿ.ಎಫ್.ಓ ರಮೇಶ್ ಕುಮಾರ್ ರೆಡ್ಡಿ ಎಂಬುವರು ನಮ್ಮ ಸ್ನೇಹಿತರಾಗಿದ್ದು ಅವರನ್ನು ಆಹ್ವಾನಿಸಿ ಅವರ ಸಹಕಾರ ಪಡೆಯಲು ನಿರ್ಧರಿಸಿರುವುದಾಗಿ ತಿಳಿಸಿದರು.
ನಾನು ಮಾಡುತ್ತಿರುವ ಕೆಲಸಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ನಮ್ಮ ಎ.ಎಸ್.ಪಿ. ಘೋರ್ಪಡೆ ಹೆಚ್ಚಿನ ಸಹಕಾರ ನೀಡುತ್ತಿದ್ದು,ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಇಲಾಖೆ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಲು ಕಾರಣವಾಗಿದೆ ಎಂದರು.
ಕೋಲಾರ ನಾಗರೀಕ ವೇದಿಕೆಯ ಆಟೋ ನಾರಾಯಣಸ್ವಾಮಿ ಮಾತನಾಡಿ, ಕ್ಲಾಕ್ ಟವರ್ ಸಂಬಂಧವಾಗಿ ರಾಜಕೀಯ ಒತ್ತಡಗಳಿಗೆ ಮಣಿಯದೆ ಕೋಮು ಗಲಭೆ ಪ್ರಚೋಚನೆಗಳಿಗೆ ಬ್ರೇಕ್ ಹಾಕಿ ಜನರ ಮೆಚ್ಚುಗೆಗೆ ಪಾತ್ರರಾದರು ಎಂದರು.
ಬಿಜೆಪಿ ವಕ್ತಾರ ಎಸ್.ಬಿ. ಮುನಿವೆಂಕಟಪ್ಪ ಮಾತನಾಡಿ. ಶಾಂತಿ ಸುವ್ಯವಸ್ಥೆ ಸೌಹಾರ್ದಾತೆ ಕಾಪಾಡಿದ್ದಾರೆ ಎಂದರು. ಜಿಪಂ ಮಾಜಿ ಸದಸ್ಯ ಬಾಲಾಜಿ ಚೆನ್ನಯ್ಯ ಮಾತನಾಡಿ, ನಮ್ಮ ತಂದೆಯವರು ಎಸ್.ಪಿ. ದೇವರಾಜ್ ಅವರ ತಂದೆಯವರ ಆತ್ಮೀಯರಾಗಿದ್ದರು ಎಂದು ನೆನಪಿಸಿ ಕೊಂಡು ಜಿಲ್ಲೆಗೆ ಅವರ ಸೇವೆ ಮತ್ತಷ್ಟು ಲಭಿಸಲಿ ಎಂದರು.
ಮುಖಂಡ ಹೆಬ್ಬಟ ನಾರಾಯಣಗೌಡ, ಕೋಲಾರ ಜಿಲ್ಲೆಗೆ ದೇವರಾಜ್ ಎಸ್ಪಿಯಾಗಿ ಬಂದಿರುವುದು ಜಿಲ್ಲೆಯ ಅಭಿವೃದ್ದಿ ದೃಷ್ಟಿಯಿಂದ ಅದೃಷ್ಟ ಎಂದು ತಿಳಿಸಿ, ಇಂತಹ ಜನಪರ ಕಾಳಜಿಯ ಅಧಿಕಾರಿಗಳಿಗೆ ಜಿಲ್ಲೆಯ ಜನತೆಯ ಅಭಿಮಾನ ಸದಾ ಇದ್ದೇ ಇರುತ್ತದೆ ಎಂದರು.ಜನವಾದಿ ಮಹಿಳಾ ಸಂಘಟನೆಯ ವಿ.ಗೀತಾ, ಕೋಲಾರದಲ್ಲಿ ನಡೆದಂತ ೪-೫ ಸೂಕ್ಷ್ಮ ಘಟನೆಗಳನ್ನು ನಿರ್ವಹಿಸುವಲ್ಲಿ ಎಸ್ಪಿ ಅವರು ತೋರಿದ ನಿಲುವು ಪ್ರಶಂಸಾರ್ಹವಾಗಿದ್ದು, ಸಾಮರಸ್ಯ,ಶಾಂತಿ ನೆಲಸಲು ಸಾಧ್ಯವಾಯಿತು ಎಂದರು.
ಮುಖಂಡ ವೆಂಕಟೇಶಗೌಡ, ಯುಗಾದಿಯ ಕೊಡುಗೆಯಾಗಿ ಜಿಲ್ಲೆಗೆ ಕಲಾವಿದರನ್ನು ಕರೆಸಿ ಸಾವಿರಾರು ಮಂದಿಗೆ ಸಂಗೀತಾ ರಸದೌತಣ ಬಡಿಸಿದ್ದನ್ನು ಮರೆಯಲಾಗದು ಎಂದರು. ಈ ಸಂದರ್ಭದಲ್ಲಿ ಎಸ್. ಪಿ. ದೇವರಾಜ್ ಮತ್ತು ಎ.ಎಸ್.ಪಿ. ಸಚಿನ್ ಘೋರ್ಪಡೆ ಅವರಿಗೆ ನಾಗರೀಕ ವೇದಿಕೆ ಸನ್ಮಾನಿಸಿ ಸಿಹಿ ಹಂಚಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಹೆಬ್ಬಟ ನಾರಾಯಣಗೌಡ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ವಿಟಪ್ಪನಹಳ್ಳಿ ವೆಂಕಟೇಶ್, ರೈತ ಸಂಘದ ಗಣೇಶಗೌಡ ಮುಂತಾದವರಿದ್ದರು.