ಪ್ರಾಮಾಣಿಕತೆ ಮೆರೆದ ಸಾರಿಗೆ ಸಿಬ್ಬಂದಿ

ಮುದ್ದೇಬಿಹಾಳ:ನ.14: ಪ್ರಯಾಣದ ವೇಳೆಯಲ್ಲಿ ಬಸ್ಸಿನಲ್ಲಿ ಪ್ರಯಾಣಿಕರರೋಬ್ಬರು ಮರೆತು ಹೋಗಿದ್ದ ಅಂದಾಜು ನಾಲ್ವತ್ತು ಸಾವಿರ ಮೌಲ್ಯದ ಬಂಗಾರ, ನಗದು ಹಣವನ್ನು ಮರಳಿ ಅವರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಘಟನೆ ಬುಧವಾರ ಪಟ್ಟಣದ ಸಾರಿಗೆ ಇಲಾಖೆಯ ಸಿಬ್ಬಂದಿ ಮಾಡಿದರು.
ಮಂಗಳೂರುದಿಂದ ಮುದ್ದೇಬಿಹಾಳಕ್ಕೆ ಬರುತ್ತಿದ್ದ ಸ್ಥಳೀಯ ಸಾರಿಗೆ ಘಟಕದ ಬಸ್ಸಿನಲ್ಲಿ ಕುಂದಾಪುರದಿಂದ ಬಾಗಲಕೋಟೆ ಜಿಲ್ಲೆಯ ಕೆರೂರ ಪಟ್ಟಣಕ್ಕೆ ಬರುತ್ತಿದ್ದ ಬಸವರಾಜ ಮರಿಯಪ್ಪ ಕಬ್ಬಲಗೇರಿ ಪ್ರಯಾಣಿಸಿದ್ದರು. ಅವರು ಕೆರೂರ ಬಸ್ ನಿಲ್ದಾಣದಲ್ಲಿ ಇಳಿಯುವ ಸಮಯದಲ್ಲಿ ಬಂಗಾರ, ಬಟ್ಟೆ, ನಗದು ಹಣ ಇಟ್ಟಿದ್ದ ಬಸ್ ಮರೆತಿದ್ದರು. ಅವರು ತಮ್ಮ ಬಸ್ ಟಿಕೇಟ್ ನಲ್ಲಿ ನಮೂದಿಸಿದ್ದ ಸಾರಿಗೆ ಇಲಾಖೆಯ ಸಂಖ್ಯೆಗೆ ಫೋನ್ ಹಚ್ಚಿ ಬ್ಯಾಗ್ ಬಸ್ಸಿನಲ್ಲಿಯೇ ಬಿಟ್ಟು ಇಳಿದ ಬಗ್ಗೆ ಮಾಹಿತಿ ನೀಡಿದ್ದರು.
ಇದೇ ವೇಳೆ ಪಟ್ಟಣಕ್ಕೆ ಬಂದ ಬಸ್ಸಿನಿಂದ ಎಲ್ಲ ಪ್ರಯಾಣಿಕರು ಇಳಿದ ನಂತರ ಬಸ್ಸಿನಲ್ಲಿ ಉಳಿದಿದ್ದ ಬ್ಯಾಗ್ ನೋಡಿದ ಬಸ್ ನಿರ್ವಾಹಕ ಬಿ.ಎಸ್.ಬಿರಾದಾರ ಚಾಲಕರಾದ ಎ.ಬಿ.ಧರಿಗೌಡರ ಹಾಗೂ ಪಿ.ಎಸ್.ಹೆಳವರ ಅವರು ಬ್ಯಾಗಿನಲ್ಲಿದ್ದ ಪರ್ಸಿನಲ್ಲಿ ಇಟ್ಟಿದ್ದ ಮೊಬೈಲ್ ಮೂಲಕ ಮಾಲೀಕರನ್ನು ಸಂಪರ್ಕಿಸಿದ್ದಾರೆ. ಬ್ಯಾಗಿನಲ್ಲಿ ಏನೇನು ಇವೆ ಎಂಬುದರ ಮಾಹಿತಿ ಪಡೆದು ಮರಳಿ ಅದನ್ನು ಮಾಲೀಕರಿಗೆ ಒಪ್ಪಿಸಿದರು. ಈ ವೇಳೆಯಲ್ಲಿ ಸಾರಿಗೆ ಘಟಕದ ಮೇಲ್ವಿಚಾರಕ ಬಾಪುಗೌಡ ಪಾಟೀಲ, ಸಂಚಾರ ನಿರೀಕ್ಷಕಿ ಸುಮಂಗಲಾ ಪತ್ತಾರ, ಸಾರಿಗೆ ಇಲಾಖೆಯ ಎಚ್.ಎಂ.ಕೊರವಿನ, ಮಂಜುನಾಥ ಸಜ್ಜನ, ಪೊಲೀಸ್ ಇಲಾಖೆಯ ಎನ್.ಆರ್.ಶಿವಳ್ಳಿ ಮತ್ತಿತರರು ಇದ್ದರು.